ಅರಣ್ಯ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ಅನಂತ ಹೆಗಡೆ ಅಶೀಸರ ಕರೆ

20/06/2020

ಮಡಿಕೇರಿ ಜೂ.20 : ಜಿಲ್ಲೆಯಲ್ಲಿ ಅರಣ್ಯ ಒತ್ತುವರಿಯಾಗದಂತೆ ಅರಣ್ಯವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಮಲೆನಾಡಿನ ಭೂಕುಸಿತ ಅಧ್ಯಯನ ಸಮಿತಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಅನಂತ ಹೆಗಡೆ ಅಶೀಸರ ಅವರು ಮಾತನಾಡಿದರು.
ಅಧ್ಯಯನ ಸಮಿತಿಯು ಭೂ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಪರಿಹಾರ ಕಂಡು ಕೊಳ್ಳಲು ಮೂರು ತಿಂಗಳಲ್ಲಿ ವರದಿ ನೀಡಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂ ಕುಸಿತ ಉಂಟಾಗಿರುವ ಪ್ರದೇಶಗಳಿಗೆ ನಮ್ಮ ತಂಡವು ಭೇಟಿ ನೀಡಿ ಭೂಕುಸಿತ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ಸಭೆಯ ವರದಿಯನ್ನು ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೊಡಗು ಜಿಲ್ಲೆ ಅಪಾರವಾದ ಅರಣ್ಯ ಸಂಪತ್ತು ಮತ್ತು ದಟ್ಟ ಕಾಡುಗಳನ್ನು ಹೊಂದಿದೆ. ಈ ಅರಣ್ಯ ಸಂಪತ್ತನ್ನು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ರಕ್ಷಿಸುವ ಕಾರ್ಯವಾಗಬೇಕಿದೆ ಎಂದು ಅವರು ತಿಳಿಸಿದರು. ಜಿಲ್ಲೆಯ ಹಲವು ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭ ಸಾಕಷ್ಟು ಹಾನಿಯಾಗಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪುನರ್ವಸತಿ ಕಾರ್ಯಗಳು ಉತ್ತಮವಾಗಿ ನಡೆದಿದೆ. ಭೂಕುಸಿತವಾದ ಅರಣ್ಯ ಪ್ರದೇಶಗಳನ್ನು ಸಹ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತಹ ಕಾರ್ಯವಾಗಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇರುವ ಪೈಸಾರಿ, ದೇವರಕಾಡು, ಇತರೆ ಕಂದಾಯ ಅರಣ್ಯಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಒಗ್ಗಟ್ಟಿನ ಕೆಲಸವನ್ನು ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಸಾಮಾಜಿಕ ಅರಣ್ಯ ಯೋಜನೆ, ಮನ್ರೇಗಾ, ಹೀಗೆ ವಿವಿಧ ಯೋಜನೆಗಳಡಿ ಅರಣ್ಯವನ್ನು ಸಂರಕ್ಷಿಸುವ ಕೆಲಸ ನಡೆಯಬೇಕು ಎಂದು ಅವರು ತಿಳಿಸಿದರು. ಪ್ರಕೃತಿಯ ಮೇಲೆ ಒತ್ತಡ ಹೆಚ್ಚಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಅಧ್ಯಕ್ಷರು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡುತ್ತಾ ಭೂ ಕುಸಿತ ಉಂಟಾದ ಪ್ರದೇಶಗಳಲ್ಲಿ ವಿಶೇಷ ಜಾಗರೂಕತೆ ವಹಿಸಿ ಜನರ ಜೀವ ರಕ್ಷಣೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಇಂತಹ ಕ್ಲಿಷ್ಟಕರ ಸಂದರ್ಭವನ್ನು ಜಿಲ್ಲಡಳಿತ ಸಮರ್ಥವಾಗಿ ನಿಭಾಯಿಸಿದೆ ಎಂದರು.
ಜಿಲ್ಲೆಯಲ್ಲಿ ಸಮತಟ್ಟಾದ ಪ್ರದೇಶ ಸಿಗುವುದು ತೀರಾ ವಿರಳ. ಜನವಸತಿ ಮಾತ್ರವಲ್ಲದೆ ದಟ್ಟ ಅರಣ್ಯ ಪ್ರದೇಶದಲ್ಲಿಯೂ ಸಹ ಭೂಕುಸಿತ ಉಂಟಾಗಿತ್ತು ಎಂದು ಸಭೆಗೆ ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶದ ನಿರ್ದೇಶಕರಾದ ಡಾ.ಶ್ರೀನಿವಾಸ್ ರೆಡ್ಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಭೂಕುಸಿತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ನೀಡುವ ರಿಮೋಟ್ ಸೆನ್ಸಿಂಗ್ ಮಾಹಿತಿಯನ್ನು ಆಧರಿಸಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು, ಮಳೆಯ ಪ್ರಮಾಣದ ಆಧಾರದ ಮೇಲೆ ಹೆಚ್ಚಿನ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವುದರಿಂದ ಭೂಕುಸಿತದಿಂದ ಉಂಟಾಗುವ ಜೀವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಮಲೆನಾಡಿನ ಭೂಕುಸಿತ ಅಧ್ಯಯನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ಅವರು ಮಾತನಾಡಿ, ಅರಣ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಅರಣ್ಯ ಇಲಾಖೆ ಮತ್ತು ಜಿಲ್ಲಡಳಿತ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಣೆ ಮಾಡಿದಲ್ಲಿ ಸಾಕಷ್ಟು ಅಪಾಯಗಳನ್ನು ತಪ್ಪಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದರು.
ಸಭೆಯಲ್ಲಿ ಭಾರತೀಯ ವಿಜ್ಞಾನ ಅಧ್ಯಯನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಅವರು ಮಾತನಾಡಿ, ಜಾಗತೀಕ ತಾಪಮಾನ ಏರಿಕೆಯಿಂದಾಗಿ ಪ್ರಕೃತಿಯಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಈ ಹಿಂದೆ ಮಳೆ ದಿನಗಳು ಹೆಚ್ಚಿದ್ದವು. ಈ ಹಿನ್ನೆಲೆಯಲ್ಲಿ ಪ್ರವಾಹ, ಭೂಕುಸಿತವಾಗುವ ಸಂಭವ ತೀರ ಕಡಿಮೆಯಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ದಿನಗಳು ಕಡಿಮೆ ಇದ್ದು 2-3 ದಿನಗಳಲ್ಲಿ ಗರಿಷ್ಠ ಮಳೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಹ, ಭೂಕುಸಿತದ ಪ್ರಕರಣಗಳು ಕಂಡು ಬರುತ್ತಿದೆ ಎಂದು ಅವರು ತಿಳಿಸಿದರು.
ಜಿಎಸ್‍ಐ ನಿರ್ದೇಶಕರಾದ ಮಾರುತಿ ಕೆ.ಇ., ಪರಿಸರ ಅಧಿಕಾರಿ ಗಣೇಶನ್, ಹಿರಿಯ ಭೂ ವಿಜ್ಞಾನಿ ರೇಷ್ಮ ಅವರು ಸಭೆಗೆ ಹಲವು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ, ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಡಿಸಿಎಫ್‍ಗಳಾದ ಪ್ರಭಾಕರನ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಎಸಿಎಫ್ ಶ್ರೀಪತಿ, ನೀಲೇಶ್ ಶಿಂಧೆ ಹಾಜರಿದ್ದರು.