ಗೋ ರಕ್ಷಕರ ಮೇಲಿನ ಪ್ರಕರಣ ಕೈಬಿಡಿ : ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮನವಿ

ಮಡಿಕೇರಿ ಜೂ.20 : ಗೋ ರಕ್ಷಕರ ವಿರುದ್ಧ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಕೈಬಿಡುವಂತೆ ಮಡಿಕೇರಿ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಗೃಹ ಸಚಿವರ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.
ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೈವದ ಸ್ಥಾನ ನೀಡಲಾಗಿದ್ದು, ಪೂಜಿಸುವ ಪದ್ಧತಿಯೂ ಇದೆ. ಹೀಗಿದ್ದರೂ ಅವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ವಧೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂದು ಅವರು ಗೃಹ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಹಲವು ಸಂದರ್ಭಗಳಲ್ಲಿ ಈ ಅಕ್ರಮ ಗೋ ಸಾಗಾಟ ಮತ್ತು ಗೋವುಗಳನ್ನು ವಧೆ ಮಾಡುವವರ ವಿರುದ್ದ ಹೋರಾಟ ನಡೆಸಿದ ಗೋ ರಕ್ಷಕರ ವಿರುದ್ದ ರಾಜ್ಯಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೋ ರಕ್ಷಕರ ವಿರುದ್ದ ಈ ರೀತಿ ಪ್ರಕರಣಗಳು ದಾಖಲಾಗಿರುವುದು ಖಂಡನೀಯವಾಗಿದ್ದು, ಇಂತಹ ಪ್ರಕರಣಗಳನ್ನು ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಕ್ರಮ ಗೋ ಸಾಗಾಣೆ ಮಾಡುವವರ ಮತ್ತು ಗೋ ವಧೆ ಮಾಡುವವರ ವಿರುದ್ದ ಯಾರೂ ಧ್ವನಿ ಎತ್ತದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಪ್ಪಚ್ಚುರಂಜನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಸರ್ಕಾರ ಕೂಡಲೇ ಗೋ ರಕ್ಷಕರ ವಿರುದ್ದ ರಾಜ್ಯಾದ್ಯಂತ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಆದೇಶ ನೀಡಬೇಕು ಎಂದು ಶಾಸಕÀ ಎಂ.ಪಿ.ಅಪ್ಪಚ್ಚುರಂಜನ್ ಅವರು ಮನವಿ ಮಾಡಿದ್ದಾರೆ.