“ಎ.ಕೆ.ಸುಬ್ಬಯ್ಯ, ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್” ವತಿಯಿಂದ ದಿನಸಿ ಕಿಟ್ ಮತ್ತು ಮಾಸ್ಕ್ ವಿತರಣೆ

21/06/2020

ಮಡಿಕೇರಿ ಜೂ.21 : ಹಿರಿಯ ನ್ಯಾಯವಾದಿ ದಿ.ಎ.ಕೆ.ಸುಬ್ಬಯ್ಯ ಅವರ ನಿರಂತರ ಹೋರಾಟದ ಫಲವಾಗಿ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಕೊಡಗಿನ ಜಮ್ಮಾ ಸಮಸ್ಯೆ ಅಧಿಕಾರಿ ಶಾಹಿಗಳ ಇಚ್ಛಾಶಕ್ತಿ ಕೊರತೆಯಿಂದ ಅನುಷ್ಠಾನವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಅವರು ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
“ಎ.ಕೆ.ಸುಬ್ಬಯ್ಯ, ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್” ವತಿಯಿಂದ ಪೊನ್ನಂಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಬಡ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದಿ.ಸುಬ್ಬಯ್ಯ ಅವರ ವಿಶೇಷ ಆಸಕ್ತಿಯ ಫಲವಾಗಿ ದಶಕಗಳ ಕಾಲ ಕಗ್ಗಂಟಾಗಿದ್ದ ಜಮ್ಮಾ ಸಮಸ್ಯೆ ಹಿಡುವಳಿದಾರರ ಪರವಾದ ತೀರ್ಪಿನ ಮೂಲಕ ಇತ್ಯರ್ಥಗೊಂಡಿದೆ. ನಂತರದ ವರ್ಷಗಳಲ್ಲಿ ಈ ತೀರ್ಪಿನ ಆಧಾರದಲ್ಲೇ ರಾಜ್ಯದ ಶಾಸನ ಸಭೆಯಲ್ಲೂ ಅಂಗೀಕಾರಗೊಂಡು ಬಳಿಕ ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕುವ ಮೂಲಕ ಅದು ಈ “ನೆಲದ ಕಾನೂನಾಗಿ” ಜಾರಿಯಲ್ಲಿದೆ. ಆದರೆ ಅಧಿಕಾರಿಗಳ ಜನ ವಿರೋಧಿ ನೀತಿಯಿಂದ ತೀರ್ಪು ಅನುಷ್ಠಾನವಾಗದೆ ಜಿಲ್ಲೆಯ ಜನರಿಗೆ ಅನ್ಯಾಯವಾಗಿದೆ ಎಂದು ವಿಷಾದಿಸಿದರು.
ಜಿಲ್ಲಾಧಿಕಾರಿಗಳ ಬಳಿ ತೆರಳಿ ಮನವಿ ಮಾಡಿಕೊಂಡರೂ ಸರಕಾರದಿಂದ ಸ್ಪಷ್ಟೀಕರಣದ ಅಗತ್ಯವಿದೆ ಎಂಬ ಸಮಜಾಯಿಷಿಕೆ ನೀಡುತ್ತಿದ್ದಾರೆ. ಈ ಕುರಿತು ಯಾವುದೇ ಸ್ಪಷ್ಟೀಕರಣದ ಅಗತ್ಯವಿಲ್ಲ. ಕಾನೂನನ್ನು ಅನುಷ್ಠಾನಗೊಳಿಸಿದರೆ ಸಾಕು ಎಂದು ಜಿಲ್ಲಾಧಿಕಾರಿಗಳಿಗೆ ನೇರವಾಗಿ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಇವರ ಕರ್ತವ್ಯ ಲೋಪದ ವಿರುದ್ಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ದಾಖಲಿಸಿ ಮತ್ತೊಂದು ಕಾನೂನು ಸಮರಕ್ಕೆ ಮುಂದಾಗಬೇಕಿದೆ. ಈ ಕುರಿತು ನ್ಯಾಯಾಂಗ ಹೋರಾಟವನ್ನು ಮುಂದುವರಿಸುವಂತೆ ವೇದಿಕೆಯಲ್ಲಿದ್ದ ದಿ.ಎ.ಕೆ.ಸುಬ್ಬಯ್ಯ ಅವರ ಪುತ್ರ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರಿಗೆ ಕೊಡಗಿನ ಹಿಡುವಳಿದಾರರ ಪರವಾಗಿ ಮನವಿ ಮಾಡಿದರು. ತಮ್ಮ ತಂದೆ ಆರಂಭಿಸಿದ “ಇನ್ನಿಂಗ್ಸ್ ನ ಕೊನೆಯ ಚೆಂಡನ್ನು” ಪೊನ್ನಣ್ಣ ಅವರೇ ಪೂರ್ಣಗೊಳಿಸುವಂತೆ ಉತ್ತೇಜಿಸಿದ ಅರುಣ್ ಮಾಚಯ್ಯ ‘ಮರದ ಮಾಲೀಕತ್ವ’ ದ ಹೋರಾಟಕ್ಕೂ ಮರುಜೀವ ನೀಡುವಂತೆ ತಿಳಿಸಿದರು.
ಹೈಕೋರ್ಟ ನ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ತಮ್ಮ ಪೋಷಕರ ನೆನಪಿಗಾಗಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ “ಎ.ಕೆ.ಸುಬ್ಬಯ್ಯ, ಪೊನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್”ನ್ನು ಆಗಸ್ಟ್ 27 ರಂದು ಸುಬ್ಬಯ್ಯ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸುವ ಆಲೋಚನೆ ಇದೆ ಎಂದರು. ಇದಕ್ಕೂ ಮೊದಲು ಈ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಲಾಕ್‍ಡೌನ್ ತಲ್ಲಣದಿಂದ ತೊಂದರೆ ಅನುಭವಿಸುತ್ತಿದ್ದ ವಲಸೆ ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ನೆರವು ನೀಡುವ ಸಾಮಾಜಿಕ ಕೆಲಸ ಮಾಡಲಾಗಿದೆ. ಕೊಡಗಿನಲ್ಲಿಯೂ ಲಾಕ್‍ಡೌನ್ ಕಾರಣದಿಂದ ತೊಂದರೆ ಅನುಭವಿಸುತ್ತಿರುವ ಬಡವರ್ಗದವರಿಗೆ ಸಹಾಯ ಮಾಡುವ ಉದ್ದೇಶದಿಂದ ಮೊದಲ ಹಂತದಲ್ಲಿ ಸುಮಾರು 2000 ದಿನಸಿ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ ಮಾಜಿ ಸದಸ್ಯ ಮೂಕಳೇರ ಎಸ್.ಕುಶಾಲಪ್ಪ, ವಿರೋಧ ಪಕ್ಷಕ್ಕೆ ಧೀಮಂತ ನಾಯಕರೊಬ್ಬರ ಅಗತ್ಯವಿದ್ದಾಗ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದ ಸುಬ್ಬಯ್ಯ ಅವರು ಮುಂದೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರು. ಆದರೆ ಅವರು ಬೇರೆಯವರನ್ನು ಮುಖ್ಯಮಂತ್ರಿಯ ಗಾದಿಗೇರಿಸಿದರೆ ಹೊರತು ಅವರು ಸ್ವತ: ಅಧಿಕಾರ ಅನುಭವಿಸದೆ ಮಾದರಿಯಾದರು ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷÀ ಕೆ.ಕೆ.ಮಂಜುನಾಥ್ ಕುಮಾರ್, ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ, ಜಿ.ಪಂ. ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಶ್ರೀಜಾ ಶಾಜಿ ಅಚ್ಚುತ್ತನ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ.ಯಾಕೂಬ್, ತಾ.ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ, ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷೆ ಮೂಕಳೇರ ಸುಮಿತಾ, ಕೊಡಗು ಸಣ್ಣ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ, ಜಿ.ಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ನವೀನ್, ಮಾಜಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಆಲೀರ ರಶೀದ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷರಾದ ಕೋಳೆರ ಭಾರತಿ, ಹಿರಿಯ ಕಾಂಗ್ರೆಸ್ ಮುಖಂಡ ಅಜಿತ್ ಅಯ್ಯಪ್ಪ, ದಿ. ಸುಬ್ಬಯ್ಯ ಅವರ ಹಿರಿಯ ಪುತ್ರ ಎ.ಎಸ್. ನರೇನ್ ಕಾರ್ಯಪ್ಪ, ಪೊನ್ನಣ್ಣ ಅವರ ಪತ್ನಿ ಕಾಂಚನ್ ಪೊನ್ನಣ್ಣ ಅವರು ಉಪಸ್ಥಿತರಿದ್ದರು.
ಚಕ್ಕೇರ ಪಂಚಮ್ ತ್ಯಾಗರಾಜ್ ಪ್ರಾರ್ಥಿಸಿದರು, ಶಾಜಿ ಅಚ್ಚುತ್ತನ್ ಸ್ವಾಗತಿಸಿದರು, ಎ.ಜೆ. ಬಾಬು ವಂದಿಸಿದರು.
ಹುದಿಕೇರಿ ಕೊಡವ ಸಮಾಜದಲ್ಲಿ, ಪೊನ್ನಂಪೇಟೆಯ ಮಹಿಳಾ ಸಮಾಜದಲ್ಲಿ, ಶ್ರೀಮಂಗಲದ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ, ಕುಟ್ಟ ಕೊಡವ ಸಮಾಜದಲ್ಲಿ, ದೇವರಪುರದ ಕಾಂಗ್ರೆಸ್ ಮುಖಂಡ ಬೆನ್ನಿ ಅವರ ಮನೆಯ ಆವರಣದಲ್ಲಿ, ಮಾಯಮುಡಿಯ ಮಹಿಳಾ ಸಮಾಜದ ಸಭಾಂಗಣದಲ್ಲಿ ಮತ್ತು ಕಾನೂರಿನ ಸಮುದಾಯ ಭವನದಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಎಲ್ಲಾ ವರ್ಗದ ಬಡ ಜನತೆಗೆ ದಿನಸಿ ಕಿಟ್ ಗಳನ್ನು ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.