ದುರಸ್ತಿಯಾದ ನಾಲ್ಕು ತಿಂಗಳಲ್ಲೇ ರಸ್ತೆ ಅವ್ಯವಸ್ಥೆ : ಐಗೂರು, ಯಡವಾರೆ ಗ್ರಾಮಸ್ಥರ ಅಸಮಾಧಾನ

21/06/2020

ಮಡಿಕೇರಿ ಜೂ.21 : ದುರಸ್ತಿಯಾದ ಕೇವಲ ನಾಲ್ಕು ತಿಂಗಳಲ್ಲೇ ಐಗೂರು ಗ್ರಾಮದಿಂದ ಯಡವಾರೆಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರಾಕೃತಿಕ ವಿಕೋಪದ ವಿಶೇಷ ಪ್ಯಾಕೇಜ್‍ನಡಿ ನಿರ್ಮಿಸಿರುವ ಈ ರಸ್ತೆ ಅವೈಜ್ಞಾನಿಕವಾಗಿದ್ದು, ವಾಹನ ಚಾಲಿಸಲು ಹರ ಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
2018-19 ರಲ್ಲಿ ಸುರಿದ ಮಹಾಮಳೆಗೆ ರಸ್ತೆಯ ಮೋರಿ ಕುಸಿದು ಬಿದ್ದಿತ್ತು. ಐಗೂರು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ನಾಲೆಗೆ ಇದೇ ಮಾರ್ಚ್ ತಿಂಗಳಿನಲ್ಲಿ ನೂತನವಾಗಿ ಮೋರಿ ಮತ್ತು ರಸ್ತೆ ನಿರ್ಮಿಸಲಾಗಿತ್ತು. ಮೋರಿ ಎತ್ತರದಲ್ಲಿದಲ್ಲಿದ್ದು, ಎರಡು ಭಾಗದಲ್ಲಿ ಕಲ್ಲನ್ನು ಹಾಕಿ ಕಾಮಗಾರಿ ಅರ್ಧದಲ್ಲೇ ನಿಲ್ಲಿಸಲಾಗಿದೆ. ಕಾಂಕ್ರಿಟ್ ಹಾಕದೆ ಇರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಮಳೆ ಹೆಚ್ಚಾದರೆ ಮೋರಿ ಬಳಿ ರಸ್ತೆಯಲ್ಲಿ ನೀರು ನಿಂತು ಕೆಸರುಮಯವಾಗಲಿದೆ.
ಕಾರ್ಗಿಲ್ ಯುದ್ದದಲ್ಲಿ ಮಡಿದ ಹುತಾತ್ಮ ಯೋಧ ಸಿಂಗೂರು ಮೇದಪ್ಪ ಅವರ ಮನೆ ಬಳಿ ಇತ್ತೀಚೆಗಷ್ಟೇ ನೂತನವಾಗಿ ನಿರ್ಮಿಸಿರುವ ರಸ್ತೆ ಕೂಡ ಕಿತ್ತು ಹೋಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.