ಸ್ಮರಣಶಕ್ತಿಯನ್ನು ಹೆಚ್ಚಿಸಲು ಒಂದೆಲಗ ಸೇವನೆ ಸಹಕಾರಿ

22/06/2020

ಒಂದೆಲಗ ಅಥವಾ (ಬ್ರಾಹ್ಮಿ) ಸರಸ್ವತೀ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ.  ಕರಾವಳಿ ಪರಿಸರದಲ್ಲಿ  ಭತ್ತದ ಗದ್ದೆಗಳ ಬದಿಯ ಜೌಗು ಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ  ಹೇರಳವಾಗಿ ಬೆಳೆಯುತ್ತದೆ. ಕಾಂಡವು ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡು ೩,೪ ಅಂಗುಲ ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಹಸಿರು ಬಣ್ಣದಿಂದ ಕೂಡಿ ದುಂಡಗಾಗಿರುತ್ತವೆ. ಬ್ರಾಹ್ಮಿಯಲ್ಲಿ ಇನ್ನೊಂದು ಬಗೆ ಇದೆ. ಅದು-ಬ್ರಾಹ್ಮಿ, ಅದಕ್ಕೆ ಗೋಳಿಸೊಪ್ಪು ಎನ್ನವರು. ಅಡಿಗೆಗೆ ಉಪಯೋಗಿಸಿ ಸಾಸು, ಪಲ್ಯೆ ಮಾಡುವರು; ಒಂದೆಲಗಕ್ಕೆ ಹಿಂದಿ ಮತ್ತು ಸಂಸ್ಕೃತದಲ್ಲಿ ಮಂಡೂಕ ಪರ್ಣಿ- ಎಂದು ಕರೆಯುವರು.

ಸುಶ್ರುತ ಸಂಹಿತೆಯಲ್ಲಿಯೂ ಬ್ರಾಹ್ಮೀಯ ಉಲ್ಲೇಖವಿದೆ,  ಏಷ್ಯಾ ಇದರ ಮೂಲಸ್ಥಾನವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಚೀನಾ ಹಾಗೂ ಆಫ್ರಿಕಾಗಳಲ್ಲಿ ಕೂಡಾ ಇದು ಪಾರಂಪರಿಕ ಔಷಧಿಯಾಗಿ ಬಳಕೆಯಲ್ಲಿದೆ.ಇದರ ವೈಜ್ಞಾನಿಕ ಹೆಸರು ಸೆಂಟಿಲ್ಲಾ ಏಸಿಯಾಟಿಕ ಎಂದು. ಕನ್ನಡದಲ್ಲಿ ಒಂದೆಲಗ. ಆಡು ಭಾಷೆಯಲ್ಲಿ ಉರಗೆ, ತುಳುವಿನಲ್ಲಿ “ತಿಮರೆ” ಕೊಂಕಣಿ- ಮರಾಠಿಗಳಲ್ಲಿ “ಕರಾನ್ನೊ” ಸಂಸ್ಕೃತ/ಹಿಂದಿಯಲ್ಲಿ “ಬ್ರಾಹ್ಮಿ” ಎಂದೂ ಕರೆಯಲ್ಪಡುತ್ತದೆ.ಈ ಸಸ್ಯ ಪ್ರಾಚೀನ ಕಾಲದಿಂದಲೂ ಔಷಧೀಯ ಗುಣವಿರುವುದೆಂದು ಗುರ್ತಿಸಿಕೊಂಡಿದೆ. ಇದರ ಎಲ್ಲಾ ಭಾಗಗಳು ಆರೋಗ್ಯ ರಕ್ಷಕ ಗುಣಗಳನ್ನು ಔಷಧೀಯ ಗುಣಗಳನ್ನು ಹೊಂದಿದೆ.ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ಒಂದೆಲಗದ ವಿಶಿಷ್ಟ ರಾಸಾಯನಿಕ ಅಂಶಗಳು ಬೆಕೊಸೈಡ್ ಎ ಮತ್ತು ಬಿ ಈ ರಾಸಾಯನಿಕಗಳು ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿವೆ . ನರರೋಗಗಳಿಗೆ ಇದು ದಿವ್ಯೌಷಧಿಯೆಂದು ಆಯುರ್ವೇದದಲ್ಲಿ ಪರಿಗಣಿಸಿದ್ದಾರೆ .

ಚಿಕಿತ್ಸೆ :

ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ.ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.ಇದು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು. ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.