ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳಿಗೆ ವೇತನ ಖೋತ : ಜೂ.26 ರಂದು ಧರಣಿ

ಮಡಿಕೇರಿ ಜೂ.22 : ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿರುವ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ (ಸಿಐಟಿಯು ಸಂಯೋಜಿತ) ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೂ.26 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಆರ್.ಭರತ್ ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿರುವ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ನಾನ್ ಕ್ಲೀನಿಂಗ್ ಮತ್ತು ಡಿ ಗ್ರೂಪ್ ನೌಕರರು, ಆಂಬ್ಯುಲೆನ್ಸ್ ಚಾಲಕರು, ಸೆಕ್ಯುರಿಟಿ ಗಾರ್ಡ್ ಹಾಗೂ ಇನ್ನಿತರ ರಂಗದಲ್ಲಿ ದುಡಿಯುತ್ತಿರುವ ನೌಕರರಿಗೆ ಈಗಾಗಲೇ ನೀಡುತ್ತಿರುವ ವೇತನ ಅತ್ಯಂತ ಕಡಿಮೆಯಾಗಿದ್ದು, ಹೆಚ್ಚು ಒತ್ತಡದಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಆದರೆ ಸರ್ಕಾರ ಇವರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಮಗೆ ನೀಡಿರುವುದಕ್ಕಿಂತಲೂ ಅಧಿಕ ಸಮಯಗಳ ಕಾಲ ದುಡಿಯುತ್ತಿರುವ ನೌಕರರು ಲಾಕ್ ಡೌನ್ ನಡುವೆ ಬಸ್‍ಗಳಿಲ್ಲದೆ ಆಟೋ ಮತ್ತು ಕಾರುಗಳಿಗೆ ದುಬಾರಿ ಬಾಡಿಗೆ ನೀಡಿ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ಸರ್ಕಾರ ಕೊರೋನಾ ವಾರಿಯರ್ಸ್ ಎಂದು ಪ್ರಮಾಣ ಪತ್ರ ನೀಡಿ ಗೌರವ ನೀಡಿದೆ ಹೊರತು ಅವರ ಜೀವನ ನಿರ್ವಹಣೆಗೆ ಬೇಕಾದ ಯಾವುದೇ ಆದಾಯವನ್ನು ನೀಡಿಲ್ಲ ಎಂದು ಟೀಕಿಸಿದರು.
ವೇತನ ಸಿಗದೆ ದೈನಂದಿನ ಖರ್ಚಿಗೆ ಪರಿತಪಿಸುತ್ತಿರುವ ನೌಕರರು ಒಷ್ಟೊತ್ತಿನ ಆಹಾರಕ್ಕೂ ಪರರಲ್ಲಿ ಕೈ ಚಾಚುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿಲ್ಲೆಯ ಕುಟ್ಟ, ಗೋಣಿಕೊಪ್ಪ, ಪಾಲಿಬೆಟ್ಟ, ನಾಪೋಕ್ಲು, ಚೆನ್ನಯ್ಯನಕೋಟೆ, ಮೂರ್ನಾಡು ಸೇರಿದಂತೆ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕ್ಲೀನಿಂಗ್ ಮತ್ತು ಡಿ ಗ್ರೂಪ್ ನೌಕರರ ಮೂರು ತಿಂಗಳ ವೇತನ ಬಾಕಿ ಇದ್ದು, ಸಂಬಂಧ ಪಟ್ಟ ಗುತ್ತಿಗೆದಾರರನ್ನು ಕರೆಸಿ ಬಾಕಿ ವೇತನ ಶೀಘ್ರದಲ್ಲಿ ಕೊಡಿಸಬೇಕು, ಕೊರೋನಾ ಕಾಲದ ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರು ಆಟೋ ಮತ್ತು ಇನ್ನಿತರ ವಾಹನಗಳಲ್ಲಿ ದುಬಾರಿ ದರ ಕೊಟ್ಟು ವೃತ್ತಿಗೆ ಹಾಜರಾಗಿದ್ದು, ಅವರ ವಾಹನದ ಬಾಡಿಗೆಯನ್ನು ಆಸ್ಪತ್ರೆ ಸಮಿತಿ ಪಾವತಿಸಿ ಬೇಕು, ಕೂಡಲೇ ಪಿಎಫ್ ಮತ್ತು ಇಎಸ್‍ಐ ಸೌಲಭ್ಯ ಒದಗಿಸಬೇಕು. ಕೊರೊನಾ ಕಾಲದಲ್ಲಿ ಹೆಚ್ಚುವರಿ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಸಕ್ತ ವೇತನದ ಎರಡು ಪಟ್ಟು ವೇತನ ನೀಡಬೇಕು, ಕಾರ್ಮಿಕರಿಗೆ ವರ್ಷಕ್ಕೆ ನೀಡ ಬೇಕಿರುವ ಸಮವಸ್ತ್ರ, ಜರ್ಕಿನ್, ಗ್ಲೌಸ್ ಮುಂತಾದವುಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ನೀಡಿಬೇಕು, ಮಾಸಿಕ ರೂ.18 ಸಾವಿರ ವೇತನ ನೀಡುವಂತೆ ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವುದೆಂದು ತಿಳಿಸಿದರು.
ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಆರೋಗ್ಯ ಅಧಿಕಾರಿಗಳಿಗೆ ನೀಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹೆಚ್.ಜಾನಕಿ ಹಾಗೂ ಮಡಿಕೇರಿ ತಾಲ್ಲೂಕು ಪದಾಧಿಕಾರಿ ಕೆ.ವಿ.ಬೇಬಿ ಉಪಸ್ಥಿತರಿದ್ದರು.
