ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥ ಕ್ಷೇತ್ರ

22/06/2020

ಶರಾವತಿ ನದಿಯ ಉಗಮ ಸ್ಥಾನವಾಗಿರುವ ಅಂಬುತೀರ್ಥ ಕ್ಷೇತ್ರವು  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು ೧೮ ಕಿಮೀ ದೂರದಲ್ಲಿದೆ.

ಉಗಮ :

ಇಲ್ಲಿರುವ ಶಿವ ದೇವಾಲಯದಲ್ಲಿರುವ ಶಿವನ ಪಾದದ ಬಳಿಯಿಂದ ಹುಟ್ಟುವ ಶರಾವತಿ ನದಿ ಅಲ್ಲಿರುವ ಕೊಳ್ಳವೊಂದಕ್ಕೆ ಹರಿದು ನಂತರ ಗುಪ್ತಗಾಮಿನಿಯಾಗಿ ಹರಿದು ನದಿಯಾಗಿ, ನಂತರ ಹಲವು ಉಪನದಿಗಳಿಂದ ಕೂಡಿಕೊಂಡು ಸುಮಾರು ೧೨೮ ಕಿಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

ಶರಾವತಿ ನದಿಯ ಪ್ರಾಮುಖ್ಯತೆ :

ಶರಾವತಿ ನದಿಯಿಂದಲೇ ವಿಶ್ವವಿಖ್ಯಾತ ಜೋಗ ಜಲಪಾತವು ಸೃಷ್ಟಿಯಾಗಿರುವುದು. ಇದಲ್ಲದೇ ಲಿಂಗನಮಕ್ಕಿಯಲ್ಲಿ ಶರಾವತಿಗೆ ಕಟ್ಟಿರುವ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆಯನ್ನೂ ಮಾಡಲಾಗುತ್ತದೆ.

ಐತಿಹ್ಯ :

ತ್ರೇತಾಯುಗದಲ್ಲಿ ರಾಮನು ಅರಣ್ಯವಾಸದಲ್ಲಿದ್ದಾಗ ಸೀತಾ ಸಮೇತನಾಗಿ ಇಲ್ಲಿ ನೆಲೆಸಿದ್ದನಂತೆ. ಆ ಸಮಯದಲ್ಲಿ ತಮ್ಮ ನಿತ್ಯದ ಪೂಜಾಕಾರ್ಯ, ಬಾಯಾರಿಕೆ ನೀಗಿಸುವ ಪ್ರಯುಕ್ತ ಹಾಗೂ ಇತರ ಕಾರ್ಯಗಳಿಗಾಗಿ ಬೇಕಾಗುವ ನೀರನ್ನು ಹೊಂದುವ ಸಲುವಾಗಿ ನೆಲಕ್ಕೆ ಬಾಣವನ್ನು ಬಿಟ್ಟಾಗ ತೀರ್ಥೋದ್ಭವವಾಯಿತಂತೆ. ಅಂಬು ಅಥವಾ ಬಾಣ ಬಿಟ್ಟಾಗ ಈ ತೀರ್ಥ ಉದ್ಭವವಾದ್ದರಿಂದ ಇದಕ್ಕೆ ಅಂಬುತೀರ್ಥವೆಂದು ಹೆಸರಾಗಿದೆ. ಶ್ರೀರಾಮನ ಶರದಿಂದ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆಯಂತೆ. ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸೀತಾ ಸಮೇತನಾಗಿ ಪೂಜಿಸುತ್ತಿದ್ದನಂತೆ.