ಕೋವಿಡ್-19 ನಿಯಂತ್ರಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಸಲಹೆ

22/06/2020

ಮಡಿಕೇರಿ ಜೂ.22 : ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ SARI [ಸಾರಿ] ಮತ್ತು IಐI [ಐಎಲ್‍ಐ] ಪ್ರಕರಣಗಳನ್ನು ತಪಾಸಣೆಗೊಳಪಡಿಸಿ. ಇದರೊಂದಿಗೆ ಕೋವಿಡ್-19 ನಿಯಂತ್ರಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲೆಯಲ್ಲಿನ ಕೋವಿಡ್-19 ಪರಿಸ್ಥಿತಿ ಹಾಗೂ ನಿಯಂತ್ರಣ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈವರೆಗೂ ಕೊರೊನಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು. ಇದರೊಂದಿಗೆ ಜಿಲ್ಲೆಯಲ್ಲಿಯೇ ಕೋವಿಡ್-19 ಪರೀಕ್ಷಾ ಪ್ರಯೋಗಾಲಯವಿದ್ದು, ಹೆಚ್ಚು ಕೋವಿಡ್-19 ಪರೀಕ್ಷೆ ನಡೆಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ರಾಜ್ಯಾದ್ಯಂತ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲಿಯೂ ಎಚ್ಚರ ತಪ್ಪದೆ ಜಾಗರೂಕತೆಯಿಂದ ಕೋವಿಡ್-19 ನಿಯಂತ್ರಿಸುವಂತೆ ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಮಾತನಾಡಿ, ಜಿಲ್ಲೆಯಾದ್ಯಂತ 5 ಸಂಚಾರಿ ಮೂಗು/ ಗಂಟಲು ದ್ರವ ಸಂಗ್ರಹಣಾ ತುರ್ತು ಸೇವಾ ವಾಹನ ಕಾರ್ಯ ನಿರ್ವಹಿಸುತ್ತಿದ್ದು, ಸಂಬಂಧಪಟ್ಟ ಸ್ಥಳಗಳಿಗೆ ತೆರಳಿ ಅಲ್ಲಿಯೇ ರೋಗ ಲಕ್ಷಣಗಳಿರುವ ವ್ಯಕ್ತಿಯ ಮೂಗು/ ಗಂಟಲು ದ್ರವ ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಡಿಕೇರಿ ತಾಲೂಕಿನಲ್ಲಿ 1 ಮತ್ತು ಸೋಮವಾರಪೇಟೆ, ವಿರಾಜಪೇಟೆ ತಾಲೂಕಿನಲ್ಲಿ ತಲಾ 2 ತುರ್ತು ಸೇವಾ ವಾಹನಗಳು ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿರುವ ಸೋಂಕಿತ ವ್ಯಕ್ತಿಗಳಿಗೂ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಿದರು.
ಹೋಬಳಿ ಮಟ್ಟದಲ್ಲಿ ಅಗತ್ಯ ಬಂದಲ್ಲಿ ನವೋದಯ ಶಾಲೆಗಳನ್ನು ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳನ್ನಾಗಿ ಬಳಸಿಕೊಳ್ಳಲು ಈಗಾಗಲೇ ಸನ್ನದ್ಧವಾಗಿರಿಸಿಕೊಂಡಿದ್ದು ಇದರೊಂದಿಗೆ ಸ್ಥಳೀಯ ರೆಸಾರ್ಟ್‍ಗಳನ್ನು ಕೂಡ ಗುರುತಿಸಿಟ್ಟುಕೊಂಡಿರುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಿವಕುಮಾರ್ ಅವರು ಮಾತನಾಡಿ, ಜೂನ್, 21 ರವರೆಗೆ ಜಿಲ್ಲೆಯಲ್ಲಿ 5,538 ಕೋವಿಡ್ ತಪಾಸಣೆ ನಡೆಸಲಾಗಿದ್ದು ಈವರೆಗೆ 3 ಪ್ರಕರಣಗಳಲ್ಲಿ ಕೋವಿಡ್-19 ಪಾಸಿಟಿವ್ ಬಂದಿದೆ. 5,255 ವರದಿಗಳು ನೆಗೆಟಿವ್ ಬಂದಿದ್ದು, 7 ಅಂತರಾಷ್ಟ್ರೀಯ ಪ್ರಯಾಣಿಕರನ್ನೊಳಗೊಂಡಂತೆ 458 ಮಂದಿ ಗೃಹ ಸಂಪರ್ಕ ತಡೆಯಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು, ಆರೋಗ್ಯ ಇಲಖೆಯ ಸಿಬ್ಬಂದಿ, ಪೊಲೀಸ್, ಕೆಎಸ್‍ಆರ್‍ಟಿಸಿ, ಎಪಿಎಂಸಿ, ಕಂದಾಯ, ಗ್ರಾ.ಪಂ. ಸೇರಿದಂತೆ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕು ಮತ್ತು ಅವರಿಗೂ ಸಹ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ನಡೆಸಬೇಕು ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಜನರು ಜ್ವರ ಮುಂತಾದ ಕೋವಿಡ್-19 ಲಕ್ಷಣಗಳಿಗೆ ಚಿಕಿತ್ಸೆ ಪಡೆಯುತ್ತಾರೆ. ಈ ಸಂದರ್ಭ ಖಾಸಗಿ ಆಸ್ಪತ್ರೆಗಳು ಅಂತಹ ವ್ಯಕ್ತಿಗಳನ್ನು ನೇರವಾಗಿ ಕೋವಿಡ್ ಆಸ್ಪತ್ರೆಗೆ ಕಳುಹಿಸಬೇಕಿರುತ್ತದೆ. ಆದರೆ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಈ ಮಾಹಿತಿಯನ್ನು ನೀಡುತ್ತಿಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆಗಳೊಂದಿಗೆ ಸಮನ್ವಯತೆ ಸಾಧಿಸಿ ಈ ಬಗ್ಗೆ ಗಮನ ಹರಿಸುವಂತೆ ಅವರು ತಿಳಿಸಿದರು.
ಜೊತೆಗೆ ಸಾಂಸ್ಥಿಕ ಸಂಪರ್ಕ ತಡೆ ಮತ್ತು ಆಸ್ಪತ್ರೆಗಳಲ್ಲಿರುವವರಿಗೆ ಸೂಕ್ತ ಶೌಚಾಲಯ ಮತ್ತು ಉತ್ತಮ ಆಹಾರ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಗುರುತಿಸಲ್ಪಟ್ಟ 6 ರಾಜ್ಯಗಳಿಂದ ಆಗಮಿಸುವವರ ಬಗ್ಗೆ ಎಚ್ಚರ ವಹಿಸಿ. ಗಡಿ ಭಾಗದಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಆಗಮಿಸುವವರ ಬಗ್ಗೆಯೂ ಎಚ್ಚರ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಅವರು ಹಲವು ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು.
ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ, ಉಪವಿಭಾಗಾಧಿಕಾರಿ ಟಿ.ಜವರೇಗೌಡ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ತಹಶೀಲ್ದಾರರು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಇತರರು ಇದ್ದರು.