ಜೂ.25 ರಿಂದ ಜು.03 ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ

22/06/2020

ಮಡಿಕೇರಿ ಜೂ.22: ಕೋವಿಡ್-19 ರ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯು ಜೂನ್ 25 ರಿಂದ ಜುಲೈ 3 ರವರೆಗೆ ರಾಜ್ಯಾದ್ಯಂತ ನಡೆಯಲಿದ್ದು, ಮಡಿಕೇರಿ ತಾಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳಿದ್ದು, 7 ಪರೀಕ್ಷಾ ಕೇಂದ್ರಗಳಲ್ಲಿ ರೆಗ್ಯುಲರ್ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದು, 1 ಕೇಂದ್ರದಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲ್ಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.
2019-20ನೇ ಸಾಲಿನಲ್ಲಿ ರೆಗ್ಯುಲರ್ 1,855, ಪುನರಾವರ್ತಿತ 163, ಖಾಸಗಿಯಾಗಿ ಒಟ್ಟು 63 ವಿದ್ಯಾರ್ಥಿಗಳು ತಾಲ್ಲೂಕಿನಿಂದ ಒಟ್ಟು 2081 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
8 ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಕೌಟ್ ಮತ್ತು ಗೈಡ್ಸ್ ಸ್ವಯಂ ಸೇವಕರು, ಹೆಚ್ಚುವರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕರು, ಪೊಲೀಸ್ ಇಲಾಖೆಯ ಸಿಬ್ಬಂದಿ, ಮೊಬೈಲ್ ಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಪಾರಂಭವಾಗುವ 2 ದಿನಗಳ ಮೊದಲು ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗುವುದು. ಹಾಗೂ ಪ್ರತೀ ಪರೀಕ್ಷೆಯ ನಂತರವೂ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕೋವಿಡ್-19 ರ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ಪ್ರತಿ ಕೊಠಡಿಯಲ್ಲಿ 18-20 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ಕೇಂದ್ರ್ರದಲ್ಲಿ ನೆಗಡಿ, ಕೆಮ್ಮು, ಜ್ವರ ಇರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಆಸನ ವ್ಯವಸ್ಥೆಗಾಗಿ ಹೆಚ್ಚುವರಿ 2 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ವಿಶ್ರಾಂತಿಗಾಗಿ ಒಂದು ಕೊಠಡಿಯನ್ನು ಕಾಯ್ದಿರಿಸಲಾಗಿದೆ. ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ಮೀಸಲಿಡಲಾಗಿದೆ.
ಸ್ವಚ್ಛ ಶೌಚಾಯಲು ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದಾಗ್ಯೂ ವೈಯಕ್ತಿಕ ಆರೋಗ್ಯದ ಹಿತ ದೃಷ್ಟಿಯಿಂದ ಮನೆಯಿಂದಲೇ ಕಾಯಿಸಿ ಆರಿಸಿದ ನೀರಿನ ಬಾಟಲ್ ತರುವುದು ಸೂಕ್ತ. ಹಾಗೂ ಪ್ರತಿ ವಿದ್ಯಾರ್ಥಿಯೂ ತನ್ನದೇ ಲೇಖನ ಸಾಮಗ್ರಿಗಳನ್ನು ತರತಕ್ಕದ್ದು. ಬೇರೆಯವರ ವಸ್ತುಗಳನ್ನು ಮುಟ್ಟಬಾರದು ಎಂದು ಅವರು ತಿಳಿಸಿದ್ದಾರೆ.
ಕೋವಿಡ್-19 ರ ಹಿನ್ನಲೆಯಲ್ಲಿ ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್‍ಗಳನ್ನು ಇಲಾಖಾ ವತಿಯಿಂದ ಈಗಾಗಲೇ ವಿತರಿಸಲಾಗಿದೆ. ವಿದ್ಯಾರ್ಥಿಗಳು ಮನೆಯಲ್ಲಿ ಮಾಸ್ಕ್‍ಗಳನ್ನು ಧರಿಸಿ ಅಧ್ಯಯನ ಮಾಡುವಂತೆ ತಿಳಿಸಲಾಗಿದೆ. ಪರೀಕ್ಷಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಕಸ್ಮಾತ್ ಮೊಬೈಲ್ ಫೋನ್ ತಂದರು ಸಹ ಮೊಬೈಲ್ ಸ್ವಾಧೀನ ಅಧಿಕಾರಿಯವರಿಗೆ ಪರೀಕ್ಷಾ ಪೂರ್ವದಲ್ಲಿ ನೀಡಿ, ಪರೀಕ್ಷೆ ಮುಗಿದ ನಂತರ ಮೊಬೈಲ್ ಫೋನನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್-19 ರ ಹಿನ್ನಲೆಯಲ್ಲಿ ಪ್ರತೀ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ಪರೀಕ್ಷಿಸಲು ಪ್ರತೀ ಕೇಂದ್ರಕ್ಕೆ ಶಿಕ್ಷಣ ಇಲಾಖೆಯಿಂದ 2 ಮತ್ತು ಆರೋಗ್ಯ ಇಲಾಖೆಯಿಂದ ತಲಾ 2 ಥರ್ಮಲ್ ಸ್ಕ್ಯಾನರ್‍ಗಳನ್ನು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒದಗಿಸಲಾಗಿದೆ. ವಿದ್ಯಾರ್ಥಿಗಳ ಮತ್ತು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಹಾಗೂ ಹ್ಯಾಂಡ್ ಸ್ಯಾನಿಟೈಸ್ ಮಾಡಿಸಿದ ನಂತರವಷ್ಟೇ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು ಎಂದು ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.