ಕೊಡಗಿನಲ್ಲಿ ಒಂದೇ ದಿನ ಮೂವರು ಕೊರೋನಾ ಸೋಂಕಿತರು ಪತ್ತೆ

22/06/2020

ಮಡಿಕೇರಿ ಜೂ.22 : ಕೊಡಗು ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಮೂವರು ಕೊರೋನಾ ಸೋಂಕಿತರು ಪತ್ತೆಯಾಗುವುದರೊಂದಿಗೆ, ಒಟ್ಟು ಪ್ರಕರಣಗಳ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಬಳಿಯ ಶಿರಂಗಾಲ ಮತ್ತು ಆಲೂರು ಸಿದ್ದಾಪುರದ ದೊಡ್ಡಳ್ಳಿ ಗ್ರಾಮಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಘೋಷಿಸಿ ಸೀಲ್ ಡೌನ್ ಮಾಡಲಾಗಿದೆ.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಈ ಬಗ್ಗೆ ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಕೊಡ್ಲಿಪೇಟೆ ವ್ಯಾಪ್ತಿಯ ಹಂಡ್ಲಿ ಗ್ರಾಮ ಪಂಚಾಯತ್ ನ ಶಿರಂಗಾಲ ಗ್ರಾಮದ 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಈ ವ್ಯಕ್ತಿ ಗದಗದಿಂದ ಕೊಡಗಿಗೆ ಆಗಮಿಸಿದ್ದರು. ಇವರು ಕುಟುಂಬ ಸದಸ್ಯರೊಂದಿಗೆ ನಿಕಟ ನಂಟು ಹೊಂದಿದ್ದು, ಕುಟಂಬಸ್ಥರನ್ನು ಇದೀಗ ಜಿಲ್ಲಾ ಕೊವಿಡ್ ಆಸ್ಪತ್ರೆಗೆÀ ದಾಖಲಿಸಿ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಈ ವ್ಯಕ್ತಿ ಹಣ್ಣಿನ ವ್ಯಾಪಾರಿಯಾಗಿದ್ದು, ಶನಿವಾರಸಂತೆ, ಸೋಮವಾರಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ. ಈ ವ್ಯಕ್ತಿ ಸಂಪರ್ಕ ಸಾಧಿಸಿದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದೂ ಜಿಲ್ಲಾಧಿಕಾರಿ ಹೇಳಿದರು.
ಸೋಂಕಿತ ವ್ಯಕ್ತಿಗೆ ಅಂತರರಾಜ್ಯ ಪ್ರಯಾಣದ ಇತಿಹಾಸ ಇಲ್ಲದಿದ್ದರೂ ಅಂತರ ಜಿಲ್ಲಾ ಪ್ರಯಾಣದ ಇತಿಹಾಸವಿದೆ. ಹೀಗಾಗಿ ಕೂಲಂಕುಶವಾಗಿ ಪ್ರಯಾಣದ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಸದ್ಯಕ್ಕೆ ಶಿರಂಗಾಲ ಗ್ರಾಮದ 32 ಮನೆಗಳಲ್ಲಿನ 120 ಸದಸ್ಯರನ್ನು ಸಂಪರ್ಕ ತಡೆಗೊಳಪಡಿಸಲಾಗಿದೆ. ಶಿರಂಗಾಲ ಗ್ರಾಮವನ್ನು ಕಂಟೈನ್ ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದ್ದು ಮೂರು ತಿಂಗಳ ಬಳಿಕ ಕೊಡಗಿನಲ್ಲಿ ಮತ್ತೊಂದು ಕಂಟೈನ್ ಮೆಂಟ್ ಜೋನ್ ಮಾಡಲಾಗಿದೆ ಎಂದೂ ಜಿಲ್ಲಾಧಿಕಾರಿ ಹೇಳಿದರು.
ಈ ಗ್ರಾಮಸ್ಥರಿಗೆ ಅಗತ್ಯವಾದ ಪಡಿತರ, ತರಕಾರಿಗಳನ್ನು ಜಿಲ್ಲಾಡಳಿತದಿಂದಲೇ 28 ದಿನಗಳ ಕಾಲ ವಿತರಿಸಲಾಗುತ್ತದೆ ಎಂದೂ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
::: ದೊಡ್ಡಳ್ಳಿ ಮಹಿಳೆಗೆ ಸೋಂಕು :::
ಸೋಮವಾರಪೇಟೆ ತಾಲ್ಲೂಕು ಆಲೂರು ಸಿದ್ದಾಪುರ ಬಳಿಯ ದೊಡ್ಡಳ್ಳಿ ಗ್ರಾಮದ 26 ವರ್ಷದ ಮಹಿಳೆಯೊಬ್ಬರಿಗೂ ಸೋಂಕು ತಗುಲಿದೆ. ಮುಂಬೈನಿಂದ ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಕಳೆದ ತಿಂಗಳು ಬಂದಿದ್ದ ಮಹಿಳೆಯು 14 ದಿನಗಳ ಗೃಹ ಸಂಪರ್ಕ ತಡೆಯಲ್ಲಿದ್ದು, ಅನಂತರ ಇತ್ತೀಚೆಗಷ್ಟೇ ದೊಡ್ಡಳ್ಳಿ ಗ್ರಾಮದ ಗಂಡನ ಮನೆಗೆ ಬಂದಿದ್ದರು. ಆಶಾ ಕಾರ್ಯಕರ್ತೆಯರು ಇವರ ಮನೆಗೆ ತೆರಳಿ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ ಸಂದರ್ಭ ಸೋಂಕು ಇರುವುದು ಪತ್ತೆಯಾಗಿದೆ ಎಂದೂ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮೆಂಟ್ ಜೋನ್ ನಲ್ಲಿರಿಸಲಾಗಿದೆ ಎಂದೂ ಅವರು ಹೇಳಿದರು.
::: ಅಯ್ಯಂಗೇರಿಯ ವ್ಯಕ್ತಿಗೆ ಕೋವಿಡ್ 19 :::
ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮ ಮೂಲದ 26 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಹೊಟೇಲ್ ಉದ್ಯಮಿಯಾಗಿರುವ ಇವರು ಮುಂಬೈನಿಂದ ಮಂಗಳೂರಿಗಾಗಿ ಕೊಡಗು ಜಿಲ್ಲೆಗೆ ಬಂದಿದ್ದರು. ಮಂಗಳೂರಿನವರೆಗೆ ಖಾಸಗಿ ಬಸ್ ನಲ್ಲಿ ಮುಂಬೈನಿಂದ ಬಂದು ಅಲ್ಲಿಂದ ಮಡಿಕೇರಿಗೆ ಸರ್ಕಾರಿ ಬಸ್ ನಲ್ಲಿ ಬಂದಿದ್ದಾರೆ. ಅವರು ಕೊವೀಡ್ ಆಸ್ಪತ್ರೆಗೆ ನೇರವಾಗಿ ಬಂದು ಪರೀಕ್ಷೆ ನಡೆಸಿದ್ದರಿಂದಾಗಿ ಕೊಡಗು ಜಿಲ್ಲೆಯಲ್ಲಿ ಇವರಿಗೆ ಇತರರ ಸಂಪರ್ಕ ಉಂಟಾಗಿರುವ ಸಾಧ್ಯತೆ ಕಡಮೆಯಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಬಸ್ ಪ್ರಯಾಣಿಕರ ಮಾಹಿತಿ ಕಲೆ ಹಾಕಲಾಗುತ್ತಿದ್ದು ಅವರನ್ನೂ ಮುಂದಿನ ದಿನಗಳಲ್ಲಿ ತಪಾಸಣೆಗೊಳಪಡಿಸಲಾಗುತ್ತದೆ ಎಂದರು.
::: ಇಬ್ಬರು ಗುಣಮುಖ :::
ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಈ ಹಿಂದೆ ದಾಖಲಾಗಿದ್ದ ಇಬ್ಬರು ಸೋಂಕಿತ ವ್ಯಕ್ತಿಗಳು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಈವರೆಗೆ ಒಟ್ಟು 6 ಪ್ರಕರಣ ವರದಿಯಾಗಿದ್ದು ಮೂವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಹೊಸದ್ದಾಗಿ ಪ್ರಾರಂಭಿಸಲಾದ ಪ್ರಯೋಗಾಲಯದಲ್ಲಿ ದಿನಕ್ಕೆ 280 ರಷ್ಟು ಗಂಟಲ ದ್ರವ ಪರೀಕ್ಷೆ ನಡೆಸಲಾಗುತ್ತಿದ್ದು, ದಿನದ 24 ಗಂಟೆಯೂ ಈ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಿಷೇಧಿಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಮತ್ತು ಡಾ.ಮಹೇಶ್ ಸುದ್ದಿಗೋಷ್ಟಿಯಲ್ಲಿದ್ದರು.