ಶಿರಂಗಾಲ ಗ್ರಾಮದ 36 ವರ್ಷದ ವ್ಯಕ್ತಿಗೆ ಸೋಂಕು

22/06/2020

ಮಡಿಕೇರಿ ಜೂ.22 : ಕೊಡ್ಲಿಪೇಟೆ ವ್ಯಾಪ್ತಿಯ ಹಂಡ್ಲಿ ಗ್ರಾಮ ಪಂಚಾಯತ್ ನ ಶಿರಂಗಾಲ ಗ್ರಾಮದ 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಈ ವ್ಯಕ್ತಿ ಗದಗದಿಂದ ಕೊಡಗಿಗೆ ಆಗಮಿಸಿದ್ದರು. ಇವರು ಕುಟುಂಬ ಸದಸ್ಯರೊಂದಿಗೆ ನಿಕಟ ನಂಟು ಹೊಂದಿದ್ದು, ಕುಟಂಬಸ್ಥರನ್ನು ಇದೀಗ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಿಸಿ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ. ಈ ವ್ಯಕ್ತಿ ಹಣ್ಣಿನ ವ್ಯಾಪಾರಿಯಾಗಿದ್ದು, ಶನಿವಾರಸಂತೆ, ಸೋಮವಾರಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ. ಈ ವ್ಯಕ್ತಿ ಸಂಪರ್ಕ ಸಾಧಿಸಿದ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದೂ ಜಿಲ್ಲಾಧಿಕಾರಿ ಹೇಳಿದರು.
ಸೋಂಕಿತ ವ್ಯಕ್ತಿಗೆ ಅಂತರರಾಜ್ಯ ಪ್ರಯಾಣದ ಇತಿಹಾಸ ಇಲ್ಲದಿದ್ದರೂ ಅಂತರ ಜಿಲ್ಲಾ ಪ್ರಯಾಣದ ಇತಿಹಾಸವಿದೆ. ಹೀಗಾಗಿ ಕೂಲಂಕುಶವಾಗಿ ಪ್ರಯಾಣದ ಮಾಹಿತಿ ಕಲೆ ಹಾಕಬೇಕಾಗುತ್ತದೆ. ಸದ್ಯಕ್ಕೆ ಶಿರಂಗಾಲ ಗ್ರಾಮದ 32 ಮನೆಗಳಲ್ಲಿನ 120 ಸದಸ್ಯರನ್ನು ಸಂಪರ್ಕ ತಡೆಗೊಳಪಡಿಸಲಾಗಿದೆ. ಶಿರಂಗಾಲ ಗ್ರಾಮವನ್ನು ಕಂಟೈನ್ ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದ್ದು ಮೂರು ತಿಂಗಳ ಬಳಿಕ ಕೊಡಗಿನಲ್ಲಿ ಮತ್ತೊಂದು ಕಂಟೈನ್ ಮೆಂಟ್ ಜೋನ್ ಮಾಡಲಾಗಿದೆ ಎಂದೂ ಜಿಲ್ಲಾಧಿಕಾರಿ ಹೇಳಿದರು.
ಈ ಗ್ರಾಮಸ್ಥರಿಗೆ ಅಗತ್ಯವಾದ ಪಡಿತರ, ತರಕಾರಿಗಳನ್ನು ಜಿಲ್ಲಾಡಳಿತದಿಂದಲೇ 28 ದಿನಗಳ ಕಾಲ ವಿತರಿಸಲಾಗುತ್ತದೆ ಎಂದೂ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.