ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ಮಡಿಕೇರಿ ಜೂ.23 : ಪೂಜೆ ಸಲ್ಲಿಸಲೆಂದು ಹುಣಸೂರಿನಿಂದ ಭಾಗಮಂಡಲಕ್ಕೆ ಬಂದಿದ್ದ ವ್ಯಕ್ತಿಯೊರ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆದಿದೆ.
ಸುಬ್ರಮಣಿ (31) ಎಂಬುವವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು. ಹುಣಸೂರಿನಿಂದ ಬಂದಿದ್ದ ಕುಟುಂಬವೊಂದು ನೀರಿಗೆ ಇಳಿದಿದ್ದಾಗ ಮಣಿಕಂಠ ಎಂಬಾತ ಮುಳುಗತೊಡಗಿದ. ಆತನನ್ನು ಮೇಲೆತ್ತಲು ಹೋದ ಸಹೋದರ ಸುಬ್ರಮಣಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಜೊತೆಯಲ್ಲಿದ್ದ ಪ್ರಮೀಳಾ ಮತ್ತು ಯಶೋದಾ ಕೂಡ ನೀರಲ್ಲಿ ಮುಳುಗಿದ್ದರು. ಕೂಡಲೇ ನೆರವಿಗಾಗಿ ಬೊಬ್ಬೆ ಹೊಡೆದಾಗ ಸ್ಥಳೀಯರಾದ ಗೋಪಾಲ್ ಎಂಬುವರರು ಈರ್ವರು ಮಹಿಳೆಯರನ್ನು ರಕ್ಷಿಸಿದರೂ ಸುಬ್ರಮಣಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಮೃತ ಸುಬ್ರಮಣಿ ಮತ್ತು ಮಣಿಕಂಠ ಇಬ್ಬರೂ ಕಾರು ಮೆಕ್ಯಾನಿಕ್‍ಗಳಾಗಿ ಹುಣಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಮೀಳಾ ಮತ್ತು ಯಶೋದಾ ಅವರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾಗಮಂಡಲ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.



