ನಿವೃತ್ತ ಎಎಸ್‍ಐ ಆತ್ಮಹತ್ಯೆಗೆ ಶರಣು : ಸೋಮವಾರಪೇಟೆಯ ಮಾದೇಗೋಡು ಗ್ರಾಮದಲ್ಲಿ ಘಟನೆ

23/06/2020

ಮಡಿಕೇರಿ ಜೂ. 23 : ಸಹಾಯಕ ಸಬ್ ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಎಸ್‍ಐ ಎಂ.ಎಸ್.ಈರಪ್ಪ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ಸಮೀಪದ ಮಾದೇಗೋಡು ಗ್ರಾಮದಲ್ಲಿ ನಡೆದಿದೆ.
ಮೃತ ಎಂ.ಎಸ್.ಈರಪ್ಪ ಕಳೆದ ಒಂದು ವರ್ಷದಿಂದ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಸೇವೆ ಸಲ್ಲಿಸಿ, ಮೇ 30 ರಂದು ನಿವೃತ್ತಿ ಹೊಂದಿದ್ದರು.
ಇಂದು ಬೆಳಿಗ್ಗೆ ತಮ್ಮ ಮನೆಯಲ್ಲೇ ಒಂಟಿ ನಳಿಕೆಯ ಬಂದೂಕು ಬಳಸಿ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಓರ್ವ ಪುತ್ರಿ ಮತ್ತು ಈರ್ವರು ಪುತ್ರರನ್ನು ಅಗಲಿದ್ದಾರೆ. ಶನಿವಾರಸಂತೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.