ತ್ರಿವೇಣಿ ಸಂಗಮದಲ್ಲಿ ಸಾವು : ದೇವಾಲಯ ಆಡಳಿತ ಮಂಡಳಿ ಸ್ಪಷ್ಟೀಕರಣ

23/06/2020

ಮಡಿಕೇರಿ ಜೂ.23 : ಭಾಗಮಂಡಲದ ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಹುಣಸೂರು ಮೂಲದ ಕುಟುಂಬವು ಜೂ. 23 ರಂದು ಭಾಗಮಂಡಲಕ್ಕೆ ಆಗಮಿಸಿದ್ದಾರೆ. ಪೂಜೆಗೆಂದು ದೇವಸ್ಥಾನಕ್ಕೆ ಹೋಗುವ ಮುಂಚಿತವಾಗಿ ಅವರ ಸಂಪ್ರದಾಯದಂತೆ ನೀರಿನಲ್ಲಿ ಮುಳುಗೆದ್ದು ದೇವಸ್ಥಾನಕ್ಕೆ ಹೋಗುವ ನಿಟ್ಟಿನಲ್ಲಿ ನದಿಗೆ ಇಳಿದಿದ್ದು, ದೇವಸ್ಥಾನದಲ್ಲಿ ಈ ರೀತಿಯ ಯಾವುದೇ ಸಂಪ್ರದಾಯ ಇರುವುದಿಲ್ಲ ಎಂದು ಭಾಗಮಂಡಲದ ಶ್ರೀ ಭಗಂಡೇಶ್ವರ ಸಮೂಹ ದೇವಾಲಯ ಸಮಿತಿ ಈ ಬಗ್ಗೆ ಸ್ಪಷ್ಟಪಡಿಸಿದೆ.

ಆಗಮಿತ ಕುಟುಂಬದ ಸದಸ್ಯರು ಪಿಂಡ ಪ್ರಧಾನ, ಕೇಶ ಮುಂಡನಕ್ಕಾಗಿ ಭಾಗಮಂಡಲಕ್ಕೆ ಆಗಮಿಸಿರುವುದಿಲ್ಲ. ಈ ಕುಟುಂಬದ ಓರ್ವ ಸದಸ್ಯ ಕಳೆದ ವರ್ಷ ಮೃತಪಟ್ಟಿದ್ದು, ಈ ಸಂಬಂಧ ವರ್ಷದ ಪೂಜೆಗೆಂದು ಭಾಗಮಂಡಲಕ್ಕೆ ಆಗಮಿಸಿ, ನದಿಗೆ ಇಳಿದ ವೇಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಅವರ ಕುಟುಂಬದ ಸದಸ್ಯರು ಕಾಪಾಡಲು ನೀರಿಗೆ ಇಳಿದಿರುತ್ತಾರೆ. ನದಿಗೆ ಇಳಿದು ನೀರಿನಲ್ಲಿ ಮುಳುಗುತ್ತಿದ್ದ ಒಟ್ಟು ಮೂರು ಮಂದಿಯನ್ನು ದೇವಸ್ಥಾನ ಕಾವಲು ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ರಕ್ಷಿಸಲು ಪ್ರಯತ್ನಿಸಿದರೂ ಸಹ ನೀರಿನಲ್ಲಿ ಮುಳುಗಿದ್ದ ಸುಬ್ರಮಣಿ ಎಂಬುವವರು ಅಷ್ಟರಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.

ರಕ್ಷಿಸಲ್ಪಟ್ಟ ಇಬ್ಬರು ಸದಸ್ಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಭಾಗಮಂಡಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದರು.