ಸಚಿವ ಕೆ ಸುಧಾಕರ್ ಪತ್ನಿ, ಮಗಳಿಗೂ ಕೋವಿಡ್ ಸೋಂಕು ದೃಢ

23/06/2020

ಬೆಂಗಳೂರು ಜೂ.23 : ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಅವರ ತಂದೆಗೆ ಕೋವಿಡ್ 19 ಪಾಸಿಟಿವ್ ಬಂದ ನಂತರ ಇದೀಗ ಸಚಿವರ ಪತ್ನಿ ಮತ್ತು ಮಗಳಿಗೂ ಕೋವಿಡ್ 19 ಸೋಂಕು ದೃಢವಾಗಿದೆ.

ಸಚಿವ ಕೆ ಸುಧಾಕರ್ ಸ್ವತಃ ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

ಸುಧಾಕರ್ ಅವರ ತಂದೆ ಪಿ ಎನ್ ಕೇಶವರೆಡ್ಡಿಯವರಿಗೆ ಅನಾರೋಗ್ಯ ಕಂಡು ಬಂದ ಹಿನ್ನಲೆಯಲ್ಲಿ ಸೋಮವಾರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಕೋವಿಡ್ ಪರೀಕ್ಷೆ ನಡೆಸಿದ್ದು, ಅವರಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಈ ಹಿನ್ನಲೆಯಲ್ಲಿ ಕುಟುಂಬದ ಇತರ ಸದಸ್ಯರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.

ಇಂದು ಸಚಿವ ಸುಧಾಕರ್ ಮತ್ತು ಪತ್ನಿ ಮಕ್ಕಳ ಕೋವಿಡ್ ವರದಿ ಬಂದಿದ್ದು, ಸುಧಾಕರ್ ಅವರ ಪತ್ನಿ ಮತ್ತು ಮಗಳಿಗೆ ಸೋಂಕು ಪಾಸಿಟಿವ್ ಆಗಿದೆ. ಸುಧಾಕರ್ ಮತ್ತು ಇಬ್ಬರು ಗಂಡು ಮಕ್ಕಳ ವರದಿ ನೆಗಟಿವ್ ಬಂದಿದೆ. ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಸಚಿವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.