ವ್ಯವಸ್ಥಿತ ರೀತಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿ : ಶಾಸಕ ಕೆ.ಜಿ. ಬೋಪಯ್ಯ ಸಲಹೆ

June 23, 2020

ಮಡಿಕೇರಿ ಜೂ.23 : ರಾಜ್ಯಾದ್ಯಂತ ಜೂನ್, 25 ರಿಂದ ಆರಂಭವಾಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ನಡೆಸಬೇಕು. ರಾಜ್ಯ ಸರ್ಕಾರದ ಮಾರ್ಗದರ್ಶನವನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸುವಂತೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.
ನಗರದ ಸಂತ ಮೈಕಲರ ಶಾಲೆಯಲ್ಲಿ ಸೋಮವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ, ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆಯ ಕುರಿತಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವ್ಯವಸ್ಥಿತ ರೀತಿಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಿಂದಲೂ ಸಹ ತೊಂದರೆಯಾಗಬಾರದು ಎಂದು ಶಾಸಕರು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಮಾಡಿ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ ಶುಚಿಗೊಳಿಸಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಒಮ್ಮೆ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಪಡೆದ ನಂತರ ಅನಗತ್ಯವಾಗಿ ವಿದ್ಯಾರ್ಥಿಯನ್ನು ಹೊರ ಕಳುಹಿಸಬೇಡಿ ಎಂದು ಅವರು ಸಲಹೆ ನೀಡಿದರು.
ಜೊತೆಗೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ. ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯೂ ಸಹ ಗೈರು ಹಾಜರಾಗದೆ ಪರೀಕ್ಷೆ ಬರೆಯುವಂತಾಗಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿ, ಥರ್ಮಲ್ ಸ್ಕ್ಯಾನಿಂಗ್ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿ ಎಂದು ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದರು.
ಇದೇ ವೇಳೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಸಿದ್ಧಪಡಿಸಿರುವ ಪರೀಕ್ಷೆಯ ಸುರಕ್ಷತಾ ನಿರ್ವಹಣೆ ಕುರಿತು ಪೋಷಕರಿಗೆ ಮಾಹಿತಿ ಮತ್ತು ಸೂಚನೆಗಳ ಕರಪತ್ರವನ್ನು ಶಾಸಕರಾದ ಕೆ.ಜಿ.ಬೋಪಯ್ಯ ಅವರು ಬಿಡುಗಡೆಗೊಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಜೂನ್, 25 ರಿಂದ ಜುಲೈ, 03 ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಡಿಕೇರಿ ಮತ್ತು ವಿರಾಜಪೇಟೆ ತಲಾ 8 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 11 ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 7,149 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 3,562 ಬಾಲಕರು ಮತ್ತು 3,587 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದರು.
ಜೊತೆಗೆ ಯಾವ ವಿದ್ಯಾರ್ಥಿ ಬಸ್ ವ್ಯವಸ್ಥೆ ಇಲ್ಲದೆ ಬಹು ದೂರದ ಊರಿನಿಂದ ಆಗಮಿಸುತ್ತಾರೆಯೋ ಅವರಿಗೆ ಇಲಾಖೆ ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಮತ್ತು ಬಿಸಿಎಂ ಇಲಾಖೆಗಳ ಹಾಸ್ಟೆಲ್‍ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಇಲಾಖೆಯಿಂದ 02 ಮತ್ತು ಆರೋಗ್ಯ ಇಲಾಖೆಯಿಂದ 02 ಥರ್ಮಲ್ ಸ್ಕ್ಯಾನರ್ ನೀಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಮೈಕ್ ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ಪಿ.ಎಸ್.ಮಚ್ಚಾಡೋ ಅವರು ಮಾಹಿತಿ ನೀಡಿದರು.
ಒಂದು ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಲಾ 2 ಮಾಸ್ಕ್ ಅನ್ನು ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.
ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರಕ್ಕೂ ಸಹ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಯಾರಿಗೂ ಸಹ ಪ್ರವೇಶ ನೀಡುವುದಿಲ್ಲ. ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ತಾ.ಪಂ.ಇಒ ಲಕ್ಷ್ಮೀ ಅವರು ಮಾತನಾಡಿ, ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ತಾಲೂಕು ಪಂಚಾಯಿತಿ ವತಿಯಿಂದ ಕೈ ಗವಸು (ಗ್ಲೌಸ್) ವ್ಯವಸ್ಥೆ ಮಾಡಲಾಗುವುದು. ತಾ.ಪಂ.ವತಿಯಿಂದ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳಿದ್ದು, 7 ಪರೀಕ್ಷಾ ಕೇಂದ್ರಗಳಲ್ಲಿ ರೆಗ್ಯುಲರ್ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದು, 1 ಕೇಂದ್ರದಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲ್ಲಿದ್ದಾರೆ ಅವರು ತಿಳಿಸಿದ್ದಾರೆ.
2019-20ನೇ ಸಾಲಿನಲ್ಲಿ ರೆಗ್ಯುಲರ್ 1,855, ಪುನರಾವರ್ತಿತ 163, ಖಾಸಗಿಯಾಗಿ ಒಟ್ಟು 63 ವಿದ್ಯಾರ್ಥಿಗಳು ತಾಲ್ಲೂಕಿನಿಂದ ಒಟ್ಟು 2081 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
8 ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಕೌಟ್ ಮತ್ತು ಗೈಡ್ಸ್ ಸ್ವಯಂ ಸೇವಕರು, ಹೆಚ್ಚುವರಿಯಾಗಿ ದೈಹಿಕ ಶಿಕ್ಷಣ ಶಿಕ್ಷಕರು, ಪೊಲೀಸ್ ಇಲಾಖೆಯ ಸಿಬ್ಬಂದಿ, ಮೊಬೈಲ್ ಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಪಾರಂಭವಾಗುವ 2 ದಿನಗಳ ಮೊದಲು ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗುವುದು. ಹಾಗೂ ಪ್ರತೀ ಪರೀಕ್ಷೆಯ ನಂತರವೂ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕೋವಿಡ್-19 ರ ಹಿನ್ನಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ಪ್ರತಿ ಕೊಠಡಿಯಲ್ಲಿ 18-20 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ಕೇಂದ್ರ್ರದಲ್ಲಿ ನೆಗಡಿ, ಕೆಮ್ಮು, ಜ್ವರ ಇರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಆಸನ ವ್ಯವಸ್ಥೆಗಾಗಿ ಹೆಚ್ಚುವರಿ 2 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ವಿಶ್ರಾಂತಿಗಾಗಿ ಒಂದು ಕೊಠಡಿಯನ್ನು ಕಾಯ್ದಿರಿಸಲಾಗಿದೆ. ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ಮೀಸಲಿಡಲಾಗಿದೆ.
ಸ್ವಚ್ಛ ಶೌಚಾಲಯ ಮತ್ತು ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರೀಕ್ಷಾ ಕೇಂದ್ರದಲ್ಲಿ ಕಲ್ಪಿಸಲಾಗಿದೆ. ಆದಾಗ್ಯೂ ವೈಯಕ್ತಿಕ ಆರೋಗ್ಯದ ಹಿತ ದೃಷ್ಟಿಯಿಂದ ಮನೆಯಿಂದಲೇ ಕಾಯಿಸಿ ಆರಿಸಿದ ನೀರಿನ ಬಾಟಲ್ ತರುವುದು ಸೂಕ್ತ. ಹಾಗೂ ಪ್ರತಿ ವಿದ್ಯಾರ್ಥಿಯೂ ತನ್ನದೇ ಲೇಖನ ಸಾಮಗ್ರಿಗಳನ್ನು ತರತಕ್ಕದ್ದು. ಬೇರೆಯವರ ವಸ್ತುಗಳನ್ನು ಮುಟ್ಟಬಾರದು ಎಂದು ಅವರು ತಿಳಿಸಿದ್ದಾರೆ.
ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಾದ ಗೀತಾ ಅವರು ಮಾತನಾಡಿ, ಪರೀಕ್ಷೆಯ ಸಂದರ್ಭ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಖರ್, ಪ್ರಭಾರ ಶಿಕ್ಷಣಾಧಿಕಾರಿ ಗಂಗಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ವಿವಿಧ ಶಾಲೆಗಳ ಮುಖ್ಯಸ್ಥರು ಇತರರು ಇದ್ದರು.