ಕೊಡಗಿಗೆ ಅಮಂಗಳವಾರ: ಮತ್ತೆ ಇಬ್ಬರಲ್ಲಿ ಕೊರೋನಾ ಸೋಂಕು ದೃಢ

23/06/2020

ಮಡಿಕೇರಿ ಜೂ. 23 : ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಎರಡು ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಕೊಡ್ಲಿಪೇಟೆ ವ್ಯಾಪ್ತಿಯ ಹಂಡ್ಲಿ ಗ್ರಾಮ ಪಂಚಾಯತ್‍ನ ಶಿರಂಗಾಲ ಗ್ರಾಮದ 36 ವರ್ಷದ ವ್ಯಾಪಾರಿಯೊಬ್ಬರಲ್ಲಿ (ಪಿ.9215) ಸೋಮವಾರ ಸೋಂಕು ಪತ್ತೆಯಾಗಿದ್ದು, ಇದೀಗ ಈ ವ್ಯಕ್ತಿಯ ಸಂಪರ್ಕದಲ್ಲಿದ್ದ ಆತನ 17 ಮತ್ತು 14 ವರ್ಷದ ಇಬ್ಬರು ಮಕ್ಕಳಲ್ಲೂ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸೋಮವಾರವೇ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಸೋಂಕು ದೃಢಪಟ್ಟಿದ್ದ ಮೂವರು ಗುಣಮುಖರಾಗಿದ್ದು, ಇದೀಗ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 5 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಟ್ರಾವೆಲ್ ಹಿಸ್ಟರಿಯೇ ಭಯಾನಕ: ಸೋಂಕು ತಗುಲಿದ್ದ ಶಿರಂಗಾಲದ ವ್ಯಕ್ತಿ ಹಣ್ಣಿನ ವ್ಯಾಪಾರಿಯಾಗಿದ್ದುದೀ ವ್ಯಕ್ತಿಯ ಜೂ.10ರ ನಂತರದ ಟ್ರಾವೆಲ್ ಹಿಸ್ಟರಿಯೇ ಭಯಾನಕವಾಗಿದೆ. ಜೂನ್ 10ರಂದು ಶನಿವಾರಸಂತೆಯಿಂದ ಬೆಂಗಳೂರಿಗೆ ತೆರಳಿದ್ದ ಈ ವ್ಯಕ್ತಿ ಮರುದಿನ ಮಧ್ಯಾಹ್ನ ಹುಣಸೂರಿಗೆ ಆಗಮಿಸಿದ್ದಾರೆ. ಜೂ.14ರವರೆಗೆ ಹುಣಸೂರಿನ ರಹಮತ್ ಮೊಹಲ್ಲಾದಲ್ಲಿರುವ ತನ್ನ ಅತ್ತಿಗೆಯ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಅವರು, ಜೂ.15ರಂದು ಬೆಳಗಿನ ಜಾವ ಸೋಮವಾರಪೇಟೆಗೆ ಬಂದಿದ್ದು, ಅಲ್ಲಿಂದ ಶನಿವಾರಸಂತೆಗೆ ತೆರಳಿದ್ದಾರೆ. ಅಂದು ರಾತ್ರಿ 10 ಗಂಟೆಗೆ ಮತ್ತೆ ಬೆಂಗಳೂರಿಗೆ ತೆರಳಿದ್ದು, 16ರಂದು ಮಧ್ಯಾಹ್ನ ಅಲ್ಲಿಂದ ಹೊರಟು ಶನಿವಾರಸಂತೆಗೆ ಹಿಂತಿರುಗಿದ್ದಾರೆ. ಅದೇ ದಿನ ಶನಿವಾರಸಂತೆಯಿಂದ ಬೆಂಗಳೂರು, ತುಮಕೂರು, ಚಿತ್ರದುರ್ಗ ಮೂಲಕ ಗದಗ ಜಿಲ್ಲೆಯ ಮುಂಡರಗಿಗೆ ಕಾರಿನಲ್ಲಿ ತೆರಳಿದ್ದಾರೆ.

ಜೂ.18ರಂದು ಮುಂಡರಗಿಯಿಂದ ಹೊರಟು 19ರ ಬೆಳಗಿನ ಜಾವ ಶನಿವಾರಸಂತೆಗೆ ತಲುಪಿದ್ದು, ಅಂದು ಅವರನ್ನು ಭೇಟಿ ಮಾಡಿದ ಆಶಾ ಕಾರ್ಯಕರ್ತೆಯರು ಆತನ ಗಂಟಲು ಮತ್ತು ಮೂಗು ದ್ರವ ಮಾದರಿ ಪರೀಕ್ಷೆ ಮಾಡಿಸುವಂತೆ ಸಲಹೆ ಮಾಡಿದ್ದು, ಅದರಂತೆ ಅಂದು ಮಧ್ಯಾಹ್ನ ಶನಿವಾರಸಂತೆ ಆಸ್ಪತ್ರೆಯಲ್ಲಿ ಗಂಟಲು, ಮೂಗು ದ್ರವ ಮಾದರಿ ನೀಡಿ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.

ಜೂ.20ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರಸಂತೆಯ ಖಾಸಗಿ ಕ್ಲಿನಿಕ್‍ಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಕೊಂಡಿದ್ದು, ಅಲ್ಲಿಂದ ತಮ್ಮ ಕುಟುಂಬದೊಂದಿಗೆ ಸೋಮವಾರಪೇಟೆಯ ಅವರ ಬಾವನ ಮನೆಗೆ ಬಂದಿದ್ದಾರೆ. ಅಲ್ಲಿ ಅವರ ಕುಟುಂಬವನ್ನು ಬಿಟ್ಟು ಕುಶಾಲನಗ ಗುಮ್ಮನಕೊಲ್ಲಿಯಲ್ಲಿ ಕಾರು ರಿಪೇರಿ ಮಾಡಿಸಿದ್ದಾರೆ. ಬಳಿಕ ಸೋಮವಾರಪೇಟೆಗೆ ತೆರಳಿ ಕುಟುಂಬದೊಂದಿಗೆ ರಾತ್ರಿ ಶನಿವಾರಸಂತೆ ತಲುಪಿದ್ದಾರೆ.

ಜೂ.22ರಂದು ಬೆಳಗ್ಗೆ ಸೋಮವಾರಪೇಟೆಯ ಸಂತೆಗೆ ಆಗಮಿಸಿ ಅಲ್ಲಿ ವ್ಯಾಪಾರ ಮಾಡಿದ್ದು, ಆ ವೇಳೆಗೆ ಅವರಿಗೆ ಸೋಂಕು ಇರುವುದು ದೃಢಪಟ್ಟ ವರದಿ ಬಂದ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರೊಂದಿಗೆ ಅವರ ಕುಟಂಬಸ್ಥರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ರವಾನಿಸಿದ್ದು, ಮಂಗಳವಾರ ಇಬ್ಬರು ಮಕ್ಕಳಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಇವರ ಸಂಪರ್ಕ ಹೊಂದಿದ ಇತರ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.