ಹತ್ತನೇ ತರಗತಿ ವಿದ್ಯಾರ್ಥಿಗಳು ಕೊರೋನಾ ಮಾರ್ಗಸೂಚಿ ಪಾಲಿಸಬೇಕು

ಮಡಿಕೇರಿ ಜೂ.23 : ಪ್ರಸ್ತುತ ಕೋವಿಡ್-19 ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಇಲಾಖೆಯು ಕೆಲವು ಮಾರ್ಗಸೂಚಿಗಳನ್ನು ಪಾಲಿಸಲು ತಿಳಿಸಿದೆ.
ಪ್ರತಿ ವಿದ್ಯಾರ್ಥಿಯು ಆರೋಗ್ಯ ತಪಾಸಣೆಗೆ ಒಳಪಡುವುದರಿಂದ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೂವತ್ತು ನಿಮಿಷ ಮುಂಚಿತವಾಗಿ ಬರುವುದು. ಆರೋಗ್ಯ ತಪಾಸಣೆಗೂ ಮುನ್ನ ನಿಮ್ಮ ಕೈಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛ ಮಾಡಿಕೊಳ್ಳಿ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಿ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಪರಸ್ಪರ ಒಂದು ಮೀಟರ್ ಅಂತರ ಕಾಪಾಡಿಕೊಂಡು, ಸರತಿ ಸಾಲಿನಲ್ಲಿ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮಾಸ್ಕ್ ಧರಿಸಲು ಮರೆತಿದ್ದಲ್ಲಿ, ಆರೋಗ್ಯ ತಪಾಸಣಾ ಕೌಂಟರ್ನಲ್ಲಿ ಮಾಸ್ಕ್ ನೀಡಲಾಗುವುದು. ಆರೋಗ್ಯ ತಪಾಸಣೆಯ ನಂತರ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆರಳಲು ಅನುಮತಿ ನೀಡಲಾಗುವುದು. ಕೆಮ್ಮುವಾಗ/ ಸೀನುವಾಗ ಮೂಗು ಮತ್ತು ಬಾಯಿಗೆ ಕರವಸ್ತ್ರವನ್ನು ಉಪಯೋಗಿಸಿ ಅಥವಾ ನಿಮ್ಮ ಮೊಣಕೈಯನ್ನು ಉಪಯೋಗಿಸಿ. ಇತರೆ ಪರೀಕ್ಷಾರ್ಥಿಗಳೊಂದಿಗೆ ಕೈ ಕುಲುಕುವುದು, ಅಪ್ಪಿಕೊಳ್ಳುವುದು, ಮುಟ್ಟುವುದು ಮತ್ತು ಎಲ್ಲೆಂದರಲ್ಲಿ ಉಗುಳುವುದನ್ನು ಮಾಡಬೇಡಿ. ಬಾಗಿಲು, ಕಿಟಕಿಗಳು ಹಾಗೂ ಇತರ ಯಾವುದೇ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬಾರದು. ಸಹ ವಿದ್ಯಾರ್ಥಿಗಳಿಂದ ಯಾವುದೇ ವಸ್ತುಗಳನ್ನು ಪಡೆಯಬೇಡಿ, ನೀವೂ ನೀಡಬೇಡಿ.
ಪರೀಕ್ಷೆ ಬರೆಯುವ ಸಮಯದಲ್ಲಿ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಮೇಲ್ವಿಚಾರಕರಿಗೆ ತಿಳಿಸಬೇಕು. ವಿದ್ಯಾರ್ಥಿಗಳು ತಮ್ಮದೇ ಆದ ಪ್ರತ್ಯೇಕ ಬ್ಯಾಗಿನಲ್ಲಿ ನೀರಿನ ಬಾಟಲಿ, ಆಹಾರದ ಡಬ್ಬಿ ತರುವುದು. ಪರೀಕ್ಷೆಗೆ ಅಗತ್ಯವಾದ ಪ್ರವೇಶಪತ್ರ ಹಾಗೂ ಇತರೆ ಸಲಕರಣೆಗಳನ್ನು ತಪ್ಪದೇ ತರುವುದು. ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಹಂತದಿಂದ ಪರೀಕ್ಷಾ ಕೇಂದ್ರದಿಂದ ನಿರ್ಗಮಿಸುವ ಹಂತದವರೆಗೂ ದೈಹಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.