ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿರೋಧ

24/06/2020

ಬೆಂಗಳೂರು ಜೂ.24 : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿರುವುದು ಶಿಕ್ಷಣ ತಜ್ಞರು, ಪೋಷಕರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ.
ರಾಜಧಾನಿ ಬೆಂಗಳೂರು ನಗರದಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ಹಿರಿಯ ವೈದ್ಯರು ಬಹಿರಂಗ ಹೇಳಿಕೆ ನೀಡಿದ್ದಾರೆ. ಇತರ ಜಿಲ್ಲೆಗಳಲ್ಲಿ ಕೂಡ ಕೋವಿಡ್ -19 ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂ.25ರಿಂದ ನಿಗದಿಯಾಗಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.
ಕೊರೋನಾ ಸಾಂಕ್ರಾಮಿಕ ಮತ್ತು ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಸರ್ಕಾರದ ಹಠದಿಂದ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯ ಆತಂಕಕ್ಕೆ ಸಿಲುಕಿದೆ. ಪ್ರತಿ ಕೋಣೆಯಲ್ಲೂ 24 ಮಕ್ಕಳು ಸುಮಾರು ಏಳು ದಿನಗಳ ಕಾಲ ಪರೀಕ್ಷೆ ಬರೆಯುವುದರಿಂದ, ಯಾರೊಬ್ಬರಿಗೆ ಸೋಂಕು ತಗುಲಿದರೂ ಇತರ ಎಲ್ಲಾ ಮಕ್ಕಳು, ಅವರ ಪೋಷಕರು, ಶಿಕ್ಷಕರು ಕೂಡ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಸರ್ಕಾರ ಪರೀಕ್ಷೆ ಹಮ್ಮಿಕೊಳ್ಳುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.