ಮತ್ತೆ ಲಾಕ್‍ಡೌನ್ ಬಗ್ಗೆ ಚಿಂತನೆ

24/06/2020

ಬೆಂಗಳೂರು ಜೂ.24 : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವ ಸೂಚನೆಯನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೀಡಿದ್ದಾರೆ.
ನಗರದಲ್ಲಿಂದು ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಈಗಾಗಲೇ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿವೆ. ಈಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರತಿ ಜಿಲ್ಲೆಗೂ ಲ್ಯಾಬ್ ಸ್ಥಾಪಿಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್‍ರೋಗಿಗಳಿಗಾಗಿ 1330 ಹಾಸಿಗೆಯ ಸೌಲಭ್ಯವಿದೆ. ಹಿರಿಯ ನಾಗರೀಕರಿಗೆ ಹೆಚ್ಚಿನ ಪರೀಕ್ಷೆ ಮಾಡಲಾಗುವುದು. ಕೊರೊನಾ ಪರೀಕ್ಷಾ ಸಂಖ್ಯೆಗಳು ಹೆಚ್ಚಾಗುತ್ತಿರುವುದರಿಂದ ಲ್ಯಾಬ್‍ಗಳ ಸಂಖ್ಯೆಯನ್ನೂ ಸಹ ಹೆಚ್ಚಿಸಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗಾಗಿ ದರ ನಿಗದಿಪಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಮೊದಲ ಆದ್ಯತೆ. ರೋಗಿಗಳು ಇಂತಹ ಖಾಸಗಿ ಆಸ್ಪತ್ರೆಗೆ ಹೋಗಬೇಕು. ಆದ್ಯತೆ ನೀಡಿ ಎಂದು ಮನವಿ ಮಾಡಿದರೆ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡಲಾಗುವುದು. “ಎ” ಲಕ್ಷಣ ಇರುವ ಪ್ರಕರಣಗಳೇ ಹೆಚ್ಚಾಗಿದ್ದು, ಇವರನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸಲಾಗುವುದು. ಕೊರೋನಾ ದೃಢಪಟ್ಟವರನ್ನು ಸರ್ಕಾರ ನಿಗಾವಹಿಸಲಿದೆ. ಹಜ್ ಭವನ ಐಸಿಯು ಕೇರ್ ಸೆಂಟರ್ ಆಗಿ ಸಿದ್ಧಗೊಂಡಿದ್ದು “ಎ” ಲಕ್ಷಣ ಇರುವ ಸೋಂಕಿತರನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುವುದು ಎಂದರು.