ಜಿಲ್ಲೆಯಲ್ಲಿ ಮೀನು ಕೃಷಿ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಲಹೆ

24/06/2020

ಮಡಿಕೇರಿ ಜೂ.24 : ಕೃಷಿ ಇಲಾಖೆಯಲ್ಲಿ ಹೊಸ ಸಂಸ್ಕರಣೆಗಳನ್ನು ನಡೆಸುವಂತೆ, ಮೀನುಗಾರಿಕಾ ಇಲಾಖೆಯಲ್ಲೂ ಅಭಿವೃದ್ಧಿ ಪರವಾದ ನೂತನ ಪ್ರಯತ್ನಗಳನ್ನು ನಡೆಸಬೇಕು ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬುಧವಾರ ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆ ಮತ್ಸ್ಯ ಕೃಷಿ ನಡೆಸಲು ಅತ್ಯಂತ ಅನುಕೂಲಕರ ಅವಕಾಶಗಳನ್ನು ಹೊಂದಿದೆ. ಕಾಫಿ ಬೆಳೆಗಾರರು ತಮ್ಮ ಖಾಸಗಿ ಕೆರೆಯಲ್ಲೂ ಸಹ ಮೀನುಗಳ ಸಾಕಾಣಿಗೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮೀನುಗಾರಿಕೆಗೆ ಕೊಡಗು ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ ಎಂದು ಅವರು ತಿಳಿಸಿದರು.
ಹಾರಂಗಿ ಮೀನುಮರಿ ಪಾಲನ ಕೇಂದ್ರದಲ್ಲಿ ಉತ್ತಮ ತಳಿಯ ಮತ್ತು ಬಲಿತ ಮೀನು ಮರಿಗಳನ್ನು ರೈತರಿಗೆ ನೀಡುವ ಕಾರ್ಯವಾಗಬೇಕು. ಮೀನುಗಾರಿಕಾ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಮತ್ತಷ್ಟು ಉತ್ಸುಕತೆಯಿಂದ ಕಾರ್ಯ ನಿರ್ವಹಿಸಬೇಕು. ಮೀನುಗಾರಿಕೆ ಇಲಾಖೆಯಲ್ಲೂ ಸಹ ಮೀನು ಮರಿಗಳ ತಳಿ ಸಂವರ್ಧನೆ ಹಾಗೂ ಮುಂತಾದ ಅಭಿವೃದ್ಧಿ ಪರ ವಿಚಾರಗಳ ಹೊಸ ಪ್ರತತ್ನಗಳನ್ನು ಕಾರ್ಯರೂಪಕ್ಕೆ ತರುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಇದರೊಂದಿಗೆ ಮೀನು ಬೆಳೆಸುವ ರೈತರ ಹೆಸರು, ಮೀನು ಬೆಳೆಸುವ ಪ್ರಮಾಣ ಮತ್ತಿತತರ ಮಾಹಿತಿಯನ್ನು ಪಡೆದುಕೊಳ್ಳಬೇಕು. ಕೃಷಿಕರಿಗೆ ನೀಡುವಂತೆಯೇ ಮೀನು ಕೃಷಿ ಮಾಡುವವರಿಗೆ ಕಿಸಾನ್ ಕಾರ್ಡ್ ಗಳನ್ನು ನೀಡುವ ಕಾರ್ಯವಾಗಬೇಕು. ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ. ವರೆಗೆ ಮೀನು ಕೃಷಿಕರಿಗೂ ಸಹ ಸಾಲ ಸೌಲಭ್ಯ ನೀಡುವ ವ್ಯವಸ್ಥೆಯಾಗಬೇಕು ಎಂದು ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಸೂಚಿಸಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ ದರ್ಶನ್ ಅವರು ಮಾಹಿತಿ ನೀಡಿ, ಹಾರಂಗಿ ಜಲಾಶಯದಲ್ಲಿ ಒಟ್ಟು 1,886 ಹೆಕ್ಟೇರ್ ಜಲ ವಿಸ್ತೀರ್ಣವನ್ನು ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ವಿಲೇವಾರಿ ಮಾಡಲಾಗಿದೆ. ಚಿಕ್ಲಿ ಹೊಳೆ ಜಲಾಶಯದ 105 ಹೆಕ್ಟೇರ್ ಜಲ ವಿಸ್ತೀರ್ಣವನ್ನು ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕೆರೆಗಳಿಗೆ ಸಂಬಂಧಿಸಿದಂತೆ ಇಲಾಖೆ ವ್ಯಾಪ್ತಿಯಲ್ಲಿ 6, ಗ್ರಾಮ ಪಂಚಾಯತ್ ನ 506 ಕೆರೆಗಳು, 3000 ಖಾಸಗಿ ಕೆರೆಗಳಿವೆ. ಇದರೊಂದಿಗೆ 211 ಕಿ.ಮೀ ಜಲ ವಿಸ್ತೀರ್ಣ ಹೊಂದಿರುವ ನದಿಭಾಗಗಳ 9 ಕೊಳಗಳಿದ್ದು, ಸೋಮವಾರಪೇಟೆ ತಾಲೂಕಿನ 35 ಕಿ.ಮೀ ಉದ್ದದ 2 ನದಿ ಭಾಗಗಳನ್ನು ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘಕ್ಕೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ 5 ಕಿ.ಮೀ. ನದಿ ಭಾಗವನ್ನು ಮತ್ಸ್ಯಧಾಮವೆಂದು ಘೋಷಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 84 ಸದಸ್ಯರನ್ನೊಳಗೊಂಡ ನೋಂದಾಯಿತ ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘವಿದೆ. ಜಿಲ್ಲೆಯಾದ್ಯಂತ 200 ಮೀನುಗಾರರು, 95 ಮೀನು ಮಾರಾಟಗಾರರು ಮತ್ತು 3000 ಮೀನು ಕೃಷಿಕರಿದ್ದಾರೆ ಎಂದು ಸಹಾಯಕ ನಿರ್ದೇಶಕರಾದ ದರ್ಶನ್ ಅವರು ಸಚಿವರಿಗೆ ಮಾಹಿತಿ ನೀಡಿದರು.
ಇದರೊಂದಿಗೆ ಜಿಲ್ಲೆಯಲ್ಲಿ ದಿನಂಪ್ರತಿ ಸರಾಸರಿ 4000 ಕೆ.ಜಿ ಯಿಂದ 5000 ಕೆ.ಜಿ ವರೆಗೆ ಮೀನು ಮಾರಾಟವಾಗುತ್ತಿದ್ದು ರಾಜ್ಯದ ಮೊದಲ 10 ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. 2018-19 ನೇ ಸಾಲಿನ ಅಂಕಿ ಅಂಶಗಳನ್ವಯ ಜಿಲ್ಲೆಯ ಒಟ್ಟು ಉತ್ಪಾದನೆ ಸಾಮಥ್ರ್ಯ 3,582 ಟನ್ ಹಾಗೂ ರೂ. 3,175.20 ಲಕ್ಷ ಮೌಲ್ಯಗಳಾಗಿವೆ ಎಂದು ಸಹಾಯಕ ನಿರ್ದೇಶಕರಾದ ದರ್ಶನ್ ಅವರು ಸಚಿವರಿಗೆ ಮಾಹಿತಿ ನೀಡಿದರು.
ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದ ಸಚಿನ್ ಅವರು ಮಾತನಾಡಿ, ಹಾರಂಗಿ ಪ್ರದೇಶದಲ್ಲಿ ಕೊಳಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 40 ಲಕ್ಷ ಮೀನಿನ ಮರಿಗಳ ಬೇಡಿಕೆಯಿದ್ದು, ಸದ್ಯ 21 ಲಕ್ಷ ಮೀನಿನ ಮರಿಗಳನ್ನು ಹಾರಾಂಗಿ ಮೀನು ಮರಿ ಉತ್ಪಾದನಾ ಕೇಂದ್ರದಿಂದ ಪೂರೈಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯ ಅವಶ್ಯ ಬೇಡಿಕೆಯನ್ನು ಜಿಲ್ಲೆಯಲ್ಲಿಯೇ ಉತ್ಪಾದಿಸುವ ಸಾಮಥ್ರ್ಯ ಬೆಳೆಸಿ. ಮುಂಬರುವ ದಿನಗಳಲ್ಲಿ 50 ಲಕ್ಷ ಮೀನು ಮರಿಗಳ ಉತ್ಪಾದನಾ ಸಾಮಥ್ರ್ಯ ವೃದ್ಧಿಸಿ. ಅಧಿಕಾರಿಗಳು ತಂಡವಾಗಿ ಕಾರ್ಯ ನಿರ್ವಹಿಸಿದಲ್ಲಿ ಇಲಾಖೆಯನ್ನು ಆರ್ಥಿಕವಾಗಿ ಹಾಗೂ ಇನ್ನುಳಿದಂತೆ ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲಾಡಳಿತ ಮತ್ತು ಇಲಾಖೆಗೆ ಸಂಬಂಧಿಸಿದಂತೆ ಹಲವು ಮಾಹಿತಿಯನ್ನು ಸಚಿವರಿಗೆ ನೀಡಿದರು.
ಇದರೊಂದಿಗೆ ಮುಜರಾಯಿ ಇಲಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಇಲಾಖೆ ವ್ಯಾಪ್ತಿಯಡಿಯಲ್ಲಿ ಬರುವ ದೇವಾಲಯಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರವೆ ಮುಗಿಸುವ ಕಾರ್ಯವಾಗಬೇಕು. ಸರ್ಕಾರದಿಂದ ಈಗಾಗಲೆ ಅನುದಾನ ಬಿಡುಗಡೆಯಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಭಗಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು ಮಾತನಾಡಿ, ಜಿಲ್ಲೆಯ ‘ಎ’ ದರ್ಜೆಯ 3 ದೇವಸ್ಥಾನಗಳಿವೆ. ಭಾಗಮಂಡಲ-ತಲಕಾವೇರಿಯ ಭಗಂಡೇಶ್ವರ ಸಮೂಹ ದೇವಾಲಯಗಳು, ಮಡಿಕೇರಿಯ ಓಂಕಾರೇಶ್ವರ ದೇವಾಲಯ ಮತ್ತು ಪಾಡಿ ಇಗ್ಗು ತಪ್ಪ ದೇವಾಲಯಗಳಿವೆ.
ಜಿಲ್ಲೆಯಲ್ಲಿ ‘ಬಿ’ ದರ್ಜೆಯ ಯಾವುದೇ ದೇವಾಲಯಗಳಿಲ್ಲ. ‘ಸಿ’ ವರ್ಗದ 4 ದೇವಾಲಯಗಳಿವೆ. ಭಗಂಡೇಶ್ವರ ದೇವಾಲಯದಲ್ಲಿ ಭಕ್ತಾದಿಗಳು ಯಾತ್ರಾರ್ಥಿಗಳ ಅನುಕೂಲಕ್ಕಾಗಿ 94.70 ಲಕ್ಷ ರೂ ವೆಚ್ಚದಲ್ಲಿ ಯಾತ್ರಿ ನಿವಾಸ ಉದ್ದೇಶಿತ ಕಟ್ಟಡ ನಿರ್ಮಾಣ ಕಾಮಗಾರಿಯಿದೆ. ಇದರೊಂದಿಗೆ ದೇವಾಲಯದಲ್ಲಿ ನೆಲಹಾಸು ಮತ್ತು ಭಾಗಮಂಡಲದ ಸಂಗಮ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಅವರು ಮಾಹಿತಿ ನೀಡಿದರು.
ಮಾಹಿತಿ ಪಡೆದು ಮಾತನಾಡಿದ ಸಚಿವರು, ಭಾಗಮಂಡಲದಲ್ಲಿ ಸಾಕಷ್ಟು ಜನರು ಪಿಂಡ ಪ್ರಧಾನ ಮುಂತಾದ ಧಾರ್ಮಿಕ ಆಚರಣೆಯ ಸಲುವಾಗಿ ದೂರದ ಊರುಗಳಿಂದ ಬರುತ್ತಾರೆ. ಅಂತಹ ಯಾತ್ರಿಗಳು ತಂಗಲು ಉದ್ದೇಶಿತ ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ಕಾಮಗಾರಿನ್ನು ಶೀಘ್ರವೆ ಆರಂಭಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ, ದೇವಾಲಯಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಿ. ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಮುಗಿಸುವಂತಾಗಲಿ ಎಂದು ಸಚಿವರಲ್ಲಿ ಮನವಿ ಮಾಡಿದರು
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿಯವರು ಮಾತನಾಡಿ, ಈಗಾಗಲೇ 2 ಕೋಟಿಯಷ್ಟು ಅನುದಾನವನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನವನ್ನು ನೀಡುವಂತೆ ಕೋರಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಭಗಂಡೇಶ್ವರ-ತಲಕಾವೇರಿ ದೇವಾಲಯದ ಅಭಿವೃದ್ಧಿಗೆ 1 ಕೋಟಿ ರೂ. ಚೆಕ್ ಮುಖಾಂತರ ನೀಡಲಾಗಿದ್ದು, ಕಾರ್ಯ ಯೋಜನೆಯ ಅನ್ವಯ ಈ ಹಣವನ್ನು ದೇವಾಲಯ ಅಭಿವೃದ್ಧಿಗೆ ಬಳಸಲಾಗುವುದು ಎಂದು ಅವರು ತಿಳಿಸಿದರು.
ಜಿ.ಪಂ ಸಿಇಒ ಕೆ. ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿ.ಪಂ ಉಪಕಾರ್ಯದರ್ಶಿ ಗುಡೂರು ಭೀಮಸೇನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್, ಪಂಚಾಯತ್ ರಾಜ್ ಎಂಜಿನಿಯರಿಂಗ್‍ನ ಇಇ ಪ್ರಭು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಾಲಚಂದ್ರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್, ಮಹದೇವ್, ಮೂರು ತಾಲೂಕುಗಳ ತಹಶೀಲ್ದಾರರಾದ ಮಹೇಶ್, ಗೋವಿಂದ ರಾಜು, ನಂದೀಶ್ ಇತರರು ಇದ್ದರು.