ಭಾಗಮಂಡಲದಲ್ಲಿ ಪಿಂಡ ಪ್ರಧಾನ : ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

24/06/2020

ಮಡಿಕೇರಿ ಜೂ.24 : ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶ ನೀಡುವ ಸಂಬಂಧ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಬುಧವಾರ ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾ ಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಂಪ್ರದಾಯ, ಕಟ್ಟುಪಾಡುಗಳನ್ನು ಪಾಲಿಸುವುದು ಅಗತ್ಯ. ರಾಜ್ಯದಲ್ಲಿ ಕೋವಿಡ್-19 ರ ಈ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಮುನ್ನೆಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಕೊಡಗಿನಲ್ಲಿ ಮೀನುಗಾರಿಕೆ ಅಭಿವೃದ್ಧಿಗಾಗಿ ವಿವಿಧ ಯೋಜನೆ ರೂಪಿಸಲಾಗುವುದು. ಕೊಡಗಿನಲ್ಲಿ ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಾಧನೆ ತೃಪ್ತಿಕರವಾಗಿದೆ. ಜಿಲ್ಲೆಯ ಸೂಕ್ತ ಸ್ಥಳಗಳಲ್ಲಿ ಇಲಾಖೆ ವತಿಯಿಂದ ಮತ್ಸ್ಯ ದರ್ಶಿನಿ ಹೊಟೇಲ್‍ಗಳನ್ನೂ ಸಹ ಆರಂಭಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ಎರಡು ವರ್ಷಗಳಿಂದ ಪ್ರಗತಿಯಲ್ಲಿರುವ ಯೋಜನೆಯಾಗಿದೆ. ಮುಂದಿನ ತಿಂಗಳು ಟೆಂಡರ್ ಕರೆದು ಕಾಮಗಾರಿಗೆ ತ್ವರಿತಗತಿಯ ಚಾಲನೆ ನೀಡಲಾಗುತ್ತದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಎಂ.ಎಲ್.ಸಿ.ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಜರಿದ್ದರು.