ಎಲ್‍ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ

25/06/2020

ಲಡಾಖ್ ಜೂ.25 : ಗಲ್ವಾನ್ ಕಣಿವೆ ಘರ್ಷಣೆಯ ನಂತರವೂ ಉದ್ಧಟತನ ಬಿಡದ ಚೀನಾ ಮಾತುಕತೆ ನಡುವೆಯೇ ಎಲ್‍ಎಸಿ ಉದ್ದಕ್ಕೂ ಮತ್ತೆ ಸೇನೆ ನಿಯೋಜನೆ, ನಿರ್ಮಾಣ ಕಾಮಗಾರಿಯನ್ನು ಮುಂದುವರೆಸಿದೆ.
ಫಿಂಗರ್ ಏರಿಯಾವೂ ಸೇರಿದಂತೆ ನಿರ್ಣಾಯಕ ಪ್ರದೇಶಗಳಲ್ಲಿ ಚೀನಾ ಹೆಚ್ಚು ಪ್ರದೇಶದೊಂದಿಗೆ ಹಾಗೂ ಹೆಚ್ಚು ನಿರ್ಮಾಣ ಕಾಮಗಾರಿ, ಸೇನಾ ನಿಯೋಜನೆ ಮಾಡುತ್ತಿದೆ. ಮೇ 4 ರಿಂದ ಈಶಾನ್ಯ ಲಡಾಖ್ ನಲ್ಲಿ ಎಲ್‍ಎಸಿಯ ಉದ್ದಕ್ಕೂ 10,000 ಸೇನಾ ಸಿಬ್ಬಂದಿಗಳ ನಿಯೋಜನೆ, ಬೃಹತ್ ಶಸ್ತ್ರಾಸ್ತ್ರಗಳು, ಡಿಫೆನ್ಸ್ ಬ್ಯಾಟರಿಗಳನ್ನು ಸ್ಥಾಪನೆ ಮಾಡಿದೆ.
ಪ್ಯಾಂಗಾಂಗ್ ತ್ಸೋ ನದಿಯ ಉದ್ದಕ್ಕೂ ಇರುವ ಫಿಂಗರ್ ಏರಿಯಾದ ಬಳಿ ಚೀನಾ ಸೇನಾ ಸಿಬ್ಬಂದಿಗಳ ನಿಯೋಜನೆ, ನಿರ್ಮಾಣ ಕಾಮಗಾರಿ ಸೇರಿದಂತೆ ತನ್ನ ಸೇನಾ ಚಟುವಟಿಕೆಗಳನ್ನು ಮುಂದುವರೆಸಿದೆ ಎಂದು ಎಎನ್‍ಐ ವರದಿ ಮೂಲಕ ತಿಳಿದುಬಂದಿದೆ.
ಭಾರತ ಫಿಂಗರ್ 8 ವರೆಗೂ ತನ್ನ ಹಕ್ಕು ಪ್ರತಿಪಾದನೆ ಮಾಡುತ್ತಿದೆ. ಆದರೆ ಇತ್ತೀಚಿನ ಚೀನಾದೊಂದಿಗಿನ ಘರ್ಷಣೆಯ ಬಳಿಕ ಚೀನಾ ಸೇನೆ ಭಾರತೀಯ ಗಸ್ತು ಸಿಬ್ಬಂದಿಗಳನ್ನು ಫಿಂಗರ್ 4 ನ್ನು ದಾಟಿ ಹೋಗದಂತೆ ನಿರ್ಬಂಧ ವಿಧಿಸುತ್ತಿದೆ.