ಕೊಡಗು ಜಿಲ್ಲೆಯಲ್ಲಿ 21 ದಿನ ಲಾಡ್ಜ್, ರೆಸಾರ್ಟ್, ಹೋಂಸ್ಟೇ ಬಂದ್

ಮಡಿಕೇರಿ. ಜು 25 : ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸದಿರಲು ಜಿಲ್ಲಾ ಹೊಟೇಲ್ , ರೆಸಾಟ್ರ್ಸ್ , ಹಾಗೂ ಹೋಂಸ್ಟೇಗಳು ತೀರ್ಮಾನ ಕೈಗೊಂಡಿವೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಎಸೋಸಿಯೇಶನ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಹಾಗೂ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿಜಿ ಅನಂತಶಯನ ಇವರುಗಳು, ಸರಕಾರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿದ್ದರೂ, ಜಿಲ್ಲೆಯ ಹಿತದೃಷ್ಟಿಯಿಂದ ಮುಂದಿನ 21 ದಿನಗಳ ಕಾಲ ಪ್ರವಾಸಿಗರಿಗೆ ವಾಸ್ತವ್ಯ ಒದಗಿಸದೆ ಇರಲು ತೀರ್ಮಾನಿಸಿದ್ದು ಸಂಸ್ಥೆಗಳ ಸದಸ್ಯರು ತೀರ್ಮಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಜೂನ್ 8ರಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ, ಜಿಲ್ಲೆಯಲ್ಲಿ ಶೇಕಡ 98ರಷ್ಟು ರೆಸಾರ್ಟ್, ವಸತಿಗೃಹಗಳು ಹಾಗೂ ಹೋಂಸ್ಟೇಗಳು ಕಾರ್ಯನಿರ್ವಹಿಸದೆ ಜನತೆಯ ಭಾವನೆಗಳಿಗೆ ಬೆಲೆ ಕೊಟ್ಟಿರುವುದನ್ನು ಸ್ಮರಿಸುವ ಅಧ್ಯಕ್ಷರುಗಳು ಕಾನೂನಾತ್ಮಕವಾಗಿ ತಮ್ಮ ವೃತ್ತಿಯನ್ನು ಮುಂದುವರಿಸಬಹುದಾ ದರೂ ಜಿಲ್ಲೆಯ ಜನತೆಯ ಆರೋಗ್ಯ ಹಾಗೂ ಭಾವನೆಗಳಿಗೆ ಸಂಸ್ಥೆಯ ಪದಾಧಿಕಾರಿಗಳು ಗೌರವ ನೀಡಿ ಮೇಲಿನ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ನೊಂದಾಯಿತ ಸಂಸ್ಥೆಗಳು ಮುಚ್ಚಲ್ಪಟ್ಟರೂ , ಅನಧಿಕೃತ ಹೋಂಸ್ಟೇ ಹಾಗೂ ವಸತಿಗೃಹಗಳು ಅತಿಥಿಗಳಿಗೆ ವಾಸ್ತವ್ಯ ನೀಡಿದರೆ ಆಯಾ ಊರಿನ ನಾಗರಿಕರು ಜಿಲ್ಲಾಡಳಿತದ ಗಮನ ಸೆಳೆಯುವಂತೆಯೂ ಮನವಿ ಮಾಡಿದ್ದು ಪ್ರವಾಸೋದ್ಯಮ ಇಲಾಖೆ ಕೂಡ ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ಕೆಲದಿನಗಳ ಕಾಲ ಪ್ರವಾಸೋದ್ಯಮ ಕ್ಷೇತ್ರವನ್ನು ಮುಚ್ಚಲು ಶಾಸಕ ಅಪ್ಪಚ್ಚು ರಂಜನ್ ಅವರು ಕೂಡ ದೂರವಾಣಿ ಮೂಲಕ ಮನವಿ ಮಾಡಿದ್ದನ್ನು ಅಧ್ಯಕ್ಷರುಗಳು ಜ್ಞಾಪಿಸಿಕೊಂಡ್ಡಿದ್ದಾರೆ.
ವಾಸ್ತವ್ಯ ಕೇಂದ್ರಗಳು ಮುಂದಿನ 21 ದಿನಗಳವರೆಗೆ ಮುಚ್ಚಲ್ಪಟ್ಟರೂ ಕೂಡ ಸರಕಾರ ಅನುಮತಿ ನೀಡಿರುವ ರೆಸ್ಟೋರೆಂಟ್ ಗಳು ಎಂದಿನಂತೆ ಸರಕಾರದ ನಿಯಮಗಳನ್ನು ಪಾಲಿಸಿ ಕಾರ್ಯನಿರ್ವಹಿಸಲಿವೆ ಎಂದು ನಾಗೇಂದ್ರಪ್ರಸಾದ್ ಮಾಹಿತಿ ನೀಡಿದ್ದಾರೆ
