ಸೋಮವಾರಪೇಟೆ ತಾಲ್ಲೂಕಿನ ಬಳಗುಂದ ಗ್ರಾಮ ಸೀಲ್ಡೌನ್

ಮಡಿಕೇರಿ ಜೂ.25 : ಕರ್ಕಳ್ಳಿ-ಬಳಗುಂದ ಗ್ರಾಮದ ಮೆಕ್ಯಾನಿಕ್ ವೃತ್ತಿಯ ವ್ಯಕ್ತಿಯೋರ್ವನಿಗೆ ಬುಧವಾರ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಗುರುವಾರದಂದು ಸೋಮವಾರಪೇಟೆ ತಾಲೂಕು ಆಡಳಿತದಿಂದ ಈ ಪ್ರದೇಶವನ್ನು ಸೀಲ್ಡೌನ್ ಮಾಡಲಾಯಿತು.
ಕೊಡ್ಲಿಪೇಟೆ ಹೋಬಳಿಯ ಹಂಡ್ಲಿ ಗ್ರಾಮ ಪಂಚಾಯಿತಿಯ ಶಿರಂಗಾಲ ಗ್ರಾಮದ ಹಣ್ಣಿನ ವ್ಯಾಪಾರಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಕರ್ಕಳ್ಳಿ ಗ್ರಾಮದ ಈ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಈತನ ಮನೆಯಿಂದ 100ಮೀ. ವ್ಯಾಪ್ತಿಯಲ್ಲಿ ಗುರುವಾರ ಸೀಲ್ಡೌನ್ ಮಾಡಲಾಯಿತು.
ಸೋಂಕಿತನ ಕುಟುಂಬದವರು ಹಾಗೂ ಆತನ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ ಪಕ್ಕದ ಮನೆಗಳ ಮಕ್ಕಳನ್ನೂ ಅರೋಗ್ಯ ಇಲಾಖೆಯ ಸಿಬ್ಬಂದಿಗಳು ತಪಾಸಣೆಗೊಳಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮಗಳನ್ನೂ ಪರೀಕ್ಷೆಗೊಳಪಡಿಸಲಾಯಿತು.
ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರು ಈ ವ್ಯಾಪ್ತಿಯ ಮನೆ ಮನೆಗಳಿಗೆ ತೆರಳಿ ಗ್ರಾಮಸ್ಥರ ವಿವರಗಳನ್ನು ಸಂಗ್ರಹಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ಗೋವಿಂದರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್, ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಬೇಳೂರು ಗ್ರಾಪಂ ಪಿಡಿಒ ಚನ್ನಕೇಶವ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡರು.