ಗೌರಿಕೆರೆ ಸರ್ವೆಕಾರ್ಯ ನಡೆಸಲು ಒತ್ತಾಯ

26/06/2020

ಮಡಿಕೇರಿ ಜೂ.26 : ವಿರಾಜಪೇಟೆಯ ಐತಿಹಾಸಿಕ ಗೌರಿಕೆರೆ ಸರ್ವೆಕಾರ್ಯವನ್ನು ವಿನಾಕಾರಣ ಮುಂದೂಡಲಾಗುತ್ತಿದೆ ಎಂದು ಆರೋಪಿಸಿರುವ ಪ.ಪಂ ಸದಸ್ಯ ಪೃಥ್ವಿನಾಥ್ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸರ್ವೆ ಕಾರ್ಯ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ಪ.ಪಂ. ವ್ಯಾಪ್ತಿಗೊಳಪಟ್ಟ ಗೌರಿ ಕೆರೆಯ ಸಮೀಪ ಸುಮಾರು 17 ಕುಟುಂಬಗಳು ವಾಸವಿದ್ದು, ಗೌರಿಕೆರೆಗೆ ಈ ಕುಟುಂಬಗಳ ಆಸ್ತಿ ಸೇರಿಹೋಗಿರುವುದರಿಂದ ಯಾವುದೇ ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದರು.
ಇತ್ತೀಚೆಗೆ ನಾಗರೀಕರ ಒತ್ತಾಯದ ಮೇರೆಗೆ ಸರ್ವೆ ಅಧಿಕಾರಿಗಳು ಸರ್ವೆ ನಡೆಸುತ್ತಾರೆ ಎನ್ನುವ ಮಾಹಿತಿ ದೊರೆತು ಸ್ಥಳೀಯರು ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಹಾಜರಾಗಿದ್ದರು. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಸರ್ವೆ ಕಾರ್ಯವನ್ನು ಮುಂದೂಡಿದರು ಮತ್ತು ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಈ ಹಿಂದೆ 2014 ರಲ್ಲಿ ಪ.ಪಂ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಂಡು ವಿರಾಜಪೇಟೆ ಪಟ್ಟಣಕ್ಕೆ ಅಡಗಿರುವ ಎಲ್ಲಾ ಕೆರೆಗಳನ್ನು ಹದ್ದುಬಸ್ತು ಸರ್ವೆ ಮಾಡಲು ತೀರ್ಮಾನಿಸಿ, ಸರ್ವೆ ಕಾರ್ಯ ನಡೆಸಲಾಗಿದೆ. ಆದರೆ ಸರ್ವೆ ಕಾರ್ಯ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಸಭೆಗಾಗಲಿ ಅಥವಾ ನಾಗರಿಕರಿಗಾಗಲೀ ನೀಡಿಲ್ಲವೆಂದರು.
ಸರ್ವೆ ಇಲಾಖೆಯ ದಾಖಲೆಯಲ್ಲಿ ಕೆರೆಯ ವಿಸ್ತೀರ್ಣ 0.56 ಎಕರೆ ಎಂದಾಗಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಒಂದೊಂದು ರೀತಿಯ ವಿಸ್ತೀರ್ಣವನ್ನು ನೀಡುತ್ತಿದ್ದು, ಈ ಬಗ್ಗೆ ಸತ್ಯಾಂಶ ಬಹಿರಂಗಗೊಳ್ಳಬೇಕಿದೆ ಎಂದು ತಿಳಿಸಿದರು.
ಗೌರಿಕೆರೆಯ ಆಸ್ತಿಯು ನಾಗರೀಕರಿಂದ ಒತ್ತುವರಿಯಾಗಿದ್ದರೆ ಅದನ್ನು ಬಿಟ್ಟು ಕೊಡಬೇಕು ಮತ್ತು ಸಾರ್ವಜನಿಕರ ಆಸ್ತಿಯು ಗೌರಿಕೆರೆ ವಿಸ್ತೀರ್ಣಕ್ಕೆ ಒಳಪಟ್ಟಿದ್ದರೆ ತೆರವುಗೊಳಿಸಬೇಕು. ಸರ್ವೆಕಾರ್ಯ ನಡೆಸದೆ ಮತ್ತೆ ನೆಪವೊಡ್ಡಿದರೆ ಸಾರ್ವಜನಿಕರ ಸಹಕಾರದೊಂದಿಗೆÀ ಪ.ಪಂ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪ.ಪಂ ಸದಸ್ಯ ರಂಜಿ ಪೂಣಚ್ಚ ಮಾತನಾಡಿ, 2019ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ವಿರಾಜಪೇಟೆ ಭಾಗದಲ್ಲಿ ಸಾಕಷ್ಟು ನಷ್ಟವಾಗಿದೆ. ಸರ್ಕಾರ ಸಂತ್ರಸ್ತರಿಗೆ ಮನೆ ಬಾಡಿಗೆ ಸೇರಿದಂತೆ ಪರಿಹಾರವನ್ನು ನೀಡಲು ವಿಫಲವಾಗಿದೆ ಎಂದು ಟೀಕಿಸಿದರು.
ವಿರಾಜಪೇಟೆ ಪಟ್ಟಣದಲ್ಲಿ ಸುಮಾರು 25 ರಿಂದ 30 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, ಗ್ರಾಮಂತರ ಪ್ರದೇಶದಲ್ಲಿ 180 ಮನೆಗಳು ನೆಲಕಚ್ಚಿವೆ. ಇಲ್ಲಿಯ ಎಲ್ಲಾ ಸಂತ್ರಸ್ತರ ನೋವಿಗೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸ್ಪಂದಿಸದಿರುವುದು ಖಂಡನೀಯ ಎಂದ ಅವರು, ತಕ್ಷಣ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಸದಸ್ಯ ಎಸ್.ಹೆಚ್.ಮತೀನ್ ಮಾತನಾಡಿ, ಇತ್ತೀಚಿಗೆ ವಿರಾಜಪೇಟೆಯ ಮೀನು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತಕ್ಕೆ ಹರಾಜು ಪ್ರಕ್ರಿಯೆಯನ್ನು ಮುಂದೂಡವಂತೆ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಜಿಲ್ಲಾಡಳಿತ ಯಾವುದೇ ಉತ್ತರ ನೀಡಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಸದಸ್ಯರುಗಳಾದ ಪಟ್ಟಡ ರಂಜು, ಕೆ.ಹೆಚ್.ಮೊಹಮ್ಮದ್ ರಾಫಿ ಹಾಗೂ ಅಗಸ್ಟಿನ್ ಬೆನ್ನಿ ಉಪಸ್ಥಿತರಿದ್ದರು.