ಕೊಡಗಿನಲ್ಲಿ 21 ದಿನಗಳ ಕಾಲ ಪ್ರವಾಸೋದ್ಯಮ ಬಂದ್

26/06/2020

ಮಡಿಕೇರಿ ಜೂ.26 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸದಿರಲು ಜಿಲ್ಲಾ ಹೊಟೇಲ್, ರೆಸಾಟ್ರ್ಸ್, ಹಾಗೂ ಹೋಂಸ್ಟೇ ಮಾಲಕರು ತೀರ್ಮಾನ ಕೈಗೊಂಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಎಸೋಸಿಯೇಷನ್ ಅಧ್ಯಕ್ಷ ಬಿ. ಆರ್. ನಾಗೇಂದ್ರ ಪ್ರಸಾದ್ ಹಾಗೂ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರುಗಳು, ಸರಕಾರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿದ್ದರೂ, ಜಿಲ್ಲೆಯ ಹಿತದೃಷ್ಟಿಯಿಂದ ಮುಂದಿನ 21 ದಿನಗಳ ಕಾಲ ಪ್ರವಾಸಿಗರಿಗೆ ವಾಸ್ತವ್ಯ ಒದಗಿಸದೇ ಇರಲು ತೀರ್ಮಾನಿಸಿದ್ದು, ಸಂಸ್ಥೆಗಳ ಸದಸ್ಯರು ತೀರ್ಮಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಜೂನ್ 8ರಿಂದ ಪ್ರವಾಸೋದ್ಯಮ ಕ್ಷೇತ್ರವನ್ನು ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ, ಜಿಲ್ಲೆಯಲ್ಲಿ ಶೇಕಡಾ 98ರಷ್ಟು ರೆಸಾರ್ಟ್, ವಸತಿಗೃಹಗಳು ಹಾಗೂ ಹೋಂಸ್ಟೇಗಳು ಕಾರ್ಯನಿರ್ವಹಿಸದೆ ಜನತೆಯ ಭಾವನೆಗಳಿಗೆ ಬೆಲೆ ಕೊಟ್ಟಿರುವುದನ್ನು ಸ್ಮರಿಸಿರುವ ಅವರುಗಳು, ಕಾನೂನಾತ್ಮಕವಾಗಿ ತಮ್ಮ ವೃತ್ತಿಯನ್ನು ಮುಂದುವರಿಸಬಹುದಾದರೂ ಜಿಲ್ಲೆಯ ಜನತೆಯ ಆರೋಗ್ಯ ಹಾಗೂ ಭಾವನೆಗಳಿಗೆ ಸಂಸ್ಥೆಯ ಪದಾಧಿಕಾರಿಗಳು ಗೌರವ ನೀಡಿ ಮೇಲಿನ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ನೋಂದಾಯಿತ ಸಂಸ್ಥೆಗಳು ಮುಚ್ಚಲ್ಪಟ್ಟರೂ, ಅನಧಿಕೃತ ಹೋಂಸ್ಟೇ ಹಾಗೂ ವಸತಿಗೃಹಗಳು ಅತಿಥಿಗಳಿಗೆ ವಾಸ್ತವ್ಯ ನೀಡಿದರೆ ಆಯಾ ಊರಿನ ನಾಗರಿಕರು ಜಿಲ್ಲಾಡಳಿತದ ಗಮನ ಸೆಳೆಯುವಂತೆಯೂ ಮನವಿ ಮಾಡಿರುವ ಅವರುಗಳು, ಪ್ರವಾಸೋದ್ಯಮ ಇಲಾಖೆ ಕೂಡಾ ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ಕೆಲದಿನಗಳ ಕಾಲ ಪ್ರವಾಸೋದ್ಯಮ ಕ್ಷೇತ್ರವನ್ನು ಮುಚ್ಚಲು ಶಾಸಕ ಅಪ್ಪಚ್ಚು ರಂಜನ್ ಅವರು ಕೂಡ ದೂರವಾಣಿ ಮೂಲಕ ಮನವಿ ಮಾಡಿದ್ದನ್ನು ಪ್ರಸ್ತಾಪಿಸಿರುವ ಅಸೋಸಿಯೇಷನ್ ಅಧ್ಯಕ್ಷರುಗಳು, ವಾಸ್ತವ್ಯ ಕೇಂದ್ರಗಳು ಮುಂದಿನ 21 ದಿನಗಳವರೆಗೆ ಮುಚ್ಚಲ್ಪಟ್ಟರೂ ಕೂಡಾ ಸರಕಾರ ಅನುಮತಿ ನೀಡಿರುವ ರೆಸ್ಟೋರೆಂಟ್‍ಗಳು ಸರಕಾರದ ನಿಯಮಗಳನ್ನು ಪಾಲಿಸಿ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
ಸೆಲೂನ್‍ಗಳೂ ಬಂದ್: ಕೊರೋನಾ ಸೋಂಕು ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಬುಧವಾರದಿಂದ ತಮ್ಮ ಸೆಲೂನ್‍ಗಳನ್ನು ಮುಚ್ಚಲು ಸೋಮವಾರಪೇಟೆ ವ್ಯಾಪ್ತಿಯ ಸವಿತಾ ಸಮಾಜದ ಬಂಧುಗಳು ನಿರ್ಧರಿಸಿದ ಬೆನ್ನಲ್ಲೇ ಇದೀಗ ಮಡಿಕೇರಿ ತಾಲೂಕಿನಾದ್ಯಂತ ಜೂ..30ರವರೆಗೆ ಸೆಲೂನ್‍ಗಳನ್ನು ಬಂದ್ ಮಾಡಲು ಮಡಿಕೇರಿ ತಾಲೂಕು ಸವಿತಾ ಸಮಾಜ ನಿರ್ಧರಿಸಿದೆ.
ಗುರುವಾರ ಈ ತೀರ್ಮಾನ ಕೈಗೊಂಡಿರುವ ತಾಲೂಕು ಸವಿತಾ ಸಮಾಜದ ಪದಾಧಿಕಾರಿಗಳು, ಈ ಅವಧಿಯಲ್ಲಿ ಹೋಂ ಸರ್ವಿಸ್ ಕೂಡಾ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚೇಂಬರ್ ಮನವಿ: ಈ ನಡುವೆ ನಗರದ ವರ್ತಕರಲ್ಲಿ ಮನವಿ ಮಾಡಿರುವ ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್, ಅಂಗಡಿಗಳಲ್ಲಿ ವಯಸ್ಸಾದವರು ಕೆಲಸಕ್ಕಿದ್ದರೆ ಅವರಿಗೆ ರಜೆ ನೀಡುವಂತೆ ಮನವಿ ಮಾಡಿದೆ. ಅಲ್ಲದೆ ಅಂಗಡಿಗೆ ಹಿರಿಯ ನಾಗರಿಕರು ಬರದಂತೆ ಎಚ್ಚರ ವಹಿಸುವಂತೆಯೂ ಕೋರಿದೆ.
ಅಂಗಡಿಗಳನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛತೆ ಕಾಪಾಡುವಂತೆ ಹಾಗೂ ಮಾಸ್ಕ್ ಹಾಕದೆ ಅಂಗಡಿಗೆ ಬರುವವರೊಂದಿಗೆ ವ್ಯವಹಾರ ನಡೆಸದಂತೆ ಮತ್ತು ಸಾಮಾಜಿಕ ಅಂತರ ಪಾಲಿಸುವಂತೆಯೂ ಮನವಿ ಮಾಡಿದೆ.