ಶಾಸಕರ ಭವನಕ್ಕೆ ಕೊರೋನಾ ಭಯ

ಬೆಂಗಳೂರು ಜೂ.26 : ಶಾಸಕರ ಭವನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು ಸೇರಿದಂತೆ ಕೆಲವು ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸೋಂಕು ಪಸರಿಸದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.
ವಿಧಾನ ಪರಿಷತ್ತಿನ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಹಾಗೂ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿಂದು ನಡೆದ ಸಭೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಶಾಸಕರ ಭವನದ ಕಟ್ಟಡಗಳಿಗೆ ತುರ್ತು ಸೋಂಕು ನಿವಾರಣಾ ಔಷಧಿ ಸಿಂಪಡಿಸಬೇಕು. ಶಾಸಕರ ಭವನ ಮುಖ್ಯ ದ್ವಾರದಲ್ಲಿ ಶಾಸಕರ ಭವನಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ಮೊಬೈಲ್ ಸಂಖ್ಯೆಯೊಂದಿಗೆ ಭೇಟಿಯ ಉದ್ದೇಶವನ್ನು ದಾಖಲಿಸಬೇಕು. ಪ್ರಾಥಮಿಕ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಕಡ್ಡಾಯಗಾಗಿದೆ.
ಶಾಸಕರ ಭವನಕ್ಕೆ ಶಾಸಕರು, ಅವರ ಆಪ್ತ ಸಹಾಯಕ, ವಾಹನ ಚಾಲಕ, ಅಂಗರಕ್ಷಕರು ಒಟ್ಟು ನಾಲ್ಕು ಮಂದಿಗೆ ಸೀಮಿತಗೊಂಡು ಪ್ರವೇಶವನ್ನು ಮಿತಿಗೊಳಿಸಲು ತೀರ್ಮಾನಿಸಲಾಯಿತು. ಶಾಸಕರ ಭವನದ ಆವರಣದಲ್ಲಿ ಶಾಸಕರ ವಾಹನಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆಯನ್ನು ಸೀಮಿತಗೊಳಿಸಿ, ಎಲ್ಲಾ ಸಿಬ್ಬಂದಿಗಳಿಗೆ ಕೋವಿಡ್ -19 ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ.
