ಜಿಲ್ಲೆಯಲ್ಲಿ ಆರು ಕೊರೋನಾ ಪಾಸಿಟಿವ್ : ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆ

26/06/2020

ಮಡಿಕೇರಿ ಜೂ. 26 : ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಎರಡು ವರ್ಷ ವಯಸ್ಸಿನ ಮಗು ಸೇರಿದಂತೆ 6 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 36 ಕೋವಿಡ್-19 ಪ್ರಕರಣಗಳು ವರದಿಯಾದಂತಾಗಿದ್ದು, 3 ಜನ ಗುಣಮುಖರಾಗಿದ್ದಾರೆ. 33 ಪ್ರಕರಣಗಳು ಕೋವಿಡ್ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 18 ನಿಯಂತ್ರಿತ (ಕಂಟೈನ್‍ಮೆಂಟ್) ಪ್ರದೇಶಗಳನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕಿನ ಹುಂಡಿ ಮತ್ತು ಸೋಮವಾರ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವಾಸ ಮಾಡಿದ್ದ, ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ ಗಂಡ, ಹೆಂಡತಿ ಮತ್ತು ಎರಡು ವರ್ಷ ವಯಸ್ಸಿನ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದರೆ, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ನಿವಾಸಿ, ಪುಣೆಯಿಂದ ಜಿಲ್ಲೆಗೆ ಹಿಂತಿರುಗಿರುವ 24 ವರ್ಷ ಪ್ರಾಯದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.

ಮತ್ತೊಂದೆಡೆ ಜಿಲ್ಲೆಯಲ್ಲಿ ಪ್ರಪ್ರಥಮ ಕೋವಿಡ್-19 ಪ್ರಕರಣ ವರದಿಯಾಗಿದ್ದ ವೀರಾಜಪೇಟೆ ತಾಲೂಕು ಕೊಂಡಂಗೇರಿ ಗ್ರಾಮದಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಶಾರ್ಜಾದಿಂದ ಮರಳಿರುವ 23 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿರುತ್ತದೆ.

ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಹೋಬಳಿಯ ಹುಲುಸೆ ಗ್ರಾಮದ 46 ವರ್ಷದ ವ್ಯಕ್ತಿಯೊಬ್ಬರಲ್ಲೂ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇವರು ಬೆಂಗಳೂರಿನಿಂದ ಜಿಲ್ಲೆಗೆ ಪ್ರಯಾಣಿಸಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಎಲ್ಲಾ ಸೋಂಕಿತ ವ್ಯಕ್ತಿಗಳನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಜಿಲ್ಲೆಯಲ್ಲಿ ಹೊಸದಾಗಿ ಹುಂಡಿ, ನೆಲ್ಲಿಹುದಿಕೇರಿ ಮತ್ತು ಹುಲುಸೆ ಗ್ರಾಮದಲ್ಲಿ ನಿಯಂತ್ರಿತ ಪ್ರದೇಶಗಳನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.