ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆ : 2 ವರ್ಷದ ಮಗುವನ್ನು ಕಾಡಿದ ವೈರಸ್

June 26, 2020

ಮಡಿಕೇರಿ ಜೂ.26 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಶುಕ್ರವಾರ ಎರಡು ವರ್ಷ ವಯಸ್ಸಿನ ಮಗು ಸೇರಿದಂತೆ 6 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಒಟ್ಟು 36 ಆಗಿದ್ದು, ಇವರಲ್ಲಿ ಮೂವರು ಗುಣಮುಖರಾಗಿದ್ದಾರೆ. ಉಳಿದ 33 ಸೋಂಕಿತರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೀರಾಜಪೇಟೆ ತಾಲೂಕಿನ ಹುಂಡಿ ಮತ್ತು ಸೋಮವಾರ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವಾಸ ಮಾಡಿದ್ದ, ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ ಗಂಡ, ಹೆಂಡತಿ ಮತ್ತು ಎರಡು ವರ್ಷ ವಯಸ್ಸಿನ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದರೆ, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ನಿವಾಸಿ, ಪುಣೆಯಿಂದ ಜಿಲ್ಲೆಗೆ ಹಿಂತಿರುಗಿರುವ 24 ವರ್ಷ ಪ್ರಾಯದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಪ್ರಪ್ರಥಮ ಕೊರೋನಾ ಪ್ರಕರಣ ವರದಿಯಾಗಿದ್ದ ವೀರಾಜಪೇಟೆ ತಾಲ್ಲೂಕಿನ ಕೊಂಡಂಗೇರಿ ಗ್ರಾಮದಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಶಾರ್ಜಾದಿಂದ ಮರಳಿರುವ 23 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಹೋಬಳಿಯ ಹುಲುಸೆ ಗ್ರಾಮದ 46 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಇವರು ಬೆಂಗಳೂರಿನಿಂದ ಜಿಲ್ಲೆಗೆ ಬಂದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಗಳನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಹೊಸದಾಗಿ ಹುಂಡಿ, ನೆಲ್ಲಿಹುದಿಕೇರಿ ಮತ್ತು ಹುಲುಸೆ ಗ್ರಾಮಗಳನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 18 ನಿಯಂತ್ರಿತ (ಕಂಟೈನ್‍ಮೆಂಟ್) ಪ್ರದೇಶಗಳಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.

error: Content is protected !!