ಸೋಮವಾರಪೇಟೆಯ ಸೀಲ್‍ಡೌನ್ ಪ್ರದೇಶಗಳಿಗೆ ಎಸ್‍ಪಿ ಡಾ.ಸುಮನ್.ಡಿ ಪನ್ನೇಕರ್ ಭೇಟಿ : ಪರಿಶೀಲನೆ

ಮಡಿಕೇರಿ ಜೂ. 26 : ಸೋಮವಾರಪೇಟೆ ಸಮೀಪದ ಬಳಗುಂದ ಮತ್ತು ಕರ್ಕಳ್ಳಿ ಗ್ರಾಮದಲ್ಲಿ ಇಬ್ಬರು ಕೋವಿಡ್-19 ಸೋಂಕಿತರು ಕಂಡು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಸಂಪೂರ್ಣವಾಗಿ ಎರಡು ಗ್ರಾಮಗಳನ್ನು ಸೀಲ್‍ಡೌನ್ ಮಾಡಲಾಯಿತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 3ರ ವಲ್ಲಭಬಾಯಿ ಬಡಾವಣೆಯ 40 ಮನೆಗಳು, ಬಳಗುಂದ ಕರ್ಕಳ್ಳಿ ವ್ಯಾಪ್ತಿಯ 371 ಮನೆಗಳನ್ನು ಕ್ಲಸ್ಟರ್ ಝೋನ್ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು.
ಗ್ರಾಮಗಳ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿದೆ. ಯಾರೂ ಮನೆಯಿಂದ ಹೊರ ಬರಬಾರದು, ಅಂಗಡಿ ಮುಂಗಟ್ಟುಗಳನ್ನು ತೆರೆಯಬಾರದು ಎಂದು ತಾಲ್ಲೂಕು ದಂಡಾಧಿಕಾರಿ ಗೋವಿಂದರಾಜ್ ಅದೇಶ ನೀಡಿದ್ದಾರೆ. ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಪ್ರತಿ ಕುಟುಂಬಗಳನ್ನು ಭೇಟಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಹೋಮ್ ಕ್ವಾರೆಂಟೈನ್ ಮಾಡಲಾಗಿದೆ. ಪಟ್ಟಣ ಸೇರಿದಂತೆ ಸೀಲ್‍ಡೌನ್ ಪ್ರದೇಶದಲ್ಲಿ ಜೌಷಧಿ ಸಿಂಪಡಿಸಲಾಯಿತು.
ಎಸ್.ಪಿ.ಭೇಟಿ: ಸೀಲ್‍ಡೌನ್ ಆದ ಗ್ರಾಮಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್.ಡಿ ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಂಕು ತಡೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಮುಂದಿನ ಅದೇಶದ ತನಕ ಯಾರು ಗ್ರಾಮವನ್ನು ಬಿಟ್ಟು ಹೊರಹೋಗಬಾರದು ಎಂದು ಹೇಳಿದರು. ಡಿವೈಎಸ್‍ಪಿ ಶೈಲೇಂದ್ರ, ಸಿ.ಐ. ನಂಜುಂಡೇಗೌಡ ಇದ್ದರು.
ಚಿತ್ರ26ಎಸ್‍ಪಿಟಿ1-ಕೋವಿಡ್-19 ಸೋಂಕು ಹಿನ್ನೆಲೆ ಸೋಮವಾರಪೇಟೆ ಸಮೀಪದ ಬಳಗುಂದ ಮತ್ತು ಕರ್ಕಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಗೆ ಬ್ಯಾರಿಕೇಟ್ ಹಾಕಿ ಬಂದ್ ಮಾಡಲಾಯಿತು.


