ಮಧ್ಯಾಹ್ನ 2ಗಂಟೆಯ ನಂತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ನಿರ್ಧಾರ

26/06/2020

ಮಡಿಕೇರಿ ಜೂ.26 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಸೀಮಿತಗೊಳಿಸಲು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿರ್ಧರಿಸಿದೆ. ಅಲ್ಲದೆ ಭಾನುವಾರ ಸಂಪೂರ್ಣ ಬಂದ್ ನಡೆಸಲು ಚಿಂತನೆ ನಡೆಸಿದ್ದು, ಈ ನಿಯಮ ಜು.4ರವರೆಗೆ ಜಾರಿಯಲ್ಲಿರಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚೇಂಬರ್ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನೆ ದಿನೆ ಹೆಚ್ಚುತ್ತಿದೆ. ಇದರಿಂದ ವ್ಯಾಪಾರಸ್ಥರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಹಿರಿಯ ನಾಗರಿಕರು ಕೂಡ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಅವರಲ್ಲೂ ತಳಮಳ ಉಂಟಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಚೇಂಬರ್‍ನ ಸ್ಥಾನೀಯ ಸಮಿತಿಗಳು ಜಿಲ್ಲಾ ಚೇಂಬರ್‍ನ ಗಮನ ಸೆಳೆದ ಕಾರಣ ತುರ್ತು ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.
ಅರ್ಥಿಕ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಾಕ್‍ಡೌನ್ ಸಡಿಲಗೊಳಿಸಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಿದ್ದವು. ಆದರೆ ಇದೀಗ ಕೊರೋನಾ ಸೋಂಕು ಮಿಂಚಿನ ವೇಗದಲ್ಲಿ ಪಸರಿಸುತ್ತಿರುವುದರಿಂದ ವರ್ತಕರ ಹಾಗೂ ಸಾರ್ವಜನಿಕರ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜು.4 ರವರೆಗೆ ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸುವಂತೆ ಮತ್ತು ಮಧ್ಯಾಹ್ನದ ಬಳಿಕ ಹಾಗೂ ಭಾನುವಾರ ಪೂರ್ಣ ದಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಕರೆ ನೀಡಿದರು.
ಈ ನಿರ್ಧಾರದಲ್ಲಿ ವರ್ತಕ ಸಮೂಹದ ರಕ್ಷಣೆಯ ಜೊತೆಗೆ ಸಾರ್ವಜನಿಕರ ಹಿತದೃಷ್ಟಿಯೂ ಅಡಗಿದೆ. ಜಿಲ್ಲೆಯ ಜನಪ್ರತಿನಿಧಿಗಳೊಂದಿಗೂ ಚರ್ಚಿಸಲಾಗಿದ್ದು, ಅವರುಗಳು ಕೂಡ ಚೇಂಬರ್‍ನ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ದೇವಯ್ಯ ಸ್ಪಷ್ಟಪಡಿಸಿದರು.
ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರಿಂದ ಸಣ್ಣ ವ್ಯಾಪಾರಿಗಳು ಸೇರಿದಂತೆ ಹಲವು ವರ್ಗದ ಜನರಿಗೆ ತೊಂದರೆಯಾಗಲಿದೆ. ಆದರೂ ಇಂದಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯವಾಗಿದ್ದು, ಇಂತಹ ವರ್ಗದ ಜನರ ರಕ್ಷಣೆಗೆ ಸರ್ಕಾರ ಯೋಜನೆ ರೂಪಿಸಬೇಕೆಂದು ಅವರು ಮನವಿ ಮಾಡಿದರು.
ಜಿಲ್ಲಾ ಚೇಂಬರ್‍ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಪೋಷಕÀ ಜಿ.ಚಿದ್ವಿಲಾಸ್ ಅವರು ಮಾತನಾಡಿ, ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ವರ್ತಕ ಸಮುದಾಯ ಆತಂಕಕ್ಕೆ ಒಳಗಾಗಿದೆ. ಈಗಾಗಲೇ ಜಿಲ್ಲಾಡಳಿತ ಕೊರೋನಾ ಪ್ರಕರಣಗಳ ಸಂಪರ್ಕ ಇರುವವರ ಪತ್ತೆಗಾಗಿ 5 ತಂಡಗಳನ್ನು ರಚಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಇದಕ್ಕೆ ಬೆಂಬಲವಾಗಿ ವರ್ತಕ ಸಮುದಾಯ ತನ್ನ ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನನದ ನಂತರ ಸ್ಥಗಿತಗೊಳಿಸಿ ಸಹಕಾರ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ವ್ಯಾಪಾರ ವಹಿವಾಟುಗಳನ್ನು ನಿಯಂತ್ರಿಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚೇಂಬರ್‍ನ ಆಯಾ ಸ್ಥಾನೀಯ ಸಮಿತಿಗಳಿಗೆ ಸಂಪೂರ್ಣ ಅಧಿಕಾರವನ್ನು ಜಿಲ್ಲಾ ಸಮಿತಿ ನೀಡಿದೆ ಎಂದರು.
ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರುಗಳೊಂದಿಗೆ ಚರ್ಚಿಸಿ ಚೇಂಬರ್ ಆಫ್ ಕಾಮರ್ಸ್ ಈ ನಿರ್ಧಾರಕ್ಕೆ ಬಂದಿದೆ. ಶಾಸಕ ಕೆ.ಜಿ. ಬೋಪಯ್ಯ ಅವರು ಸಹ ಚೇಂಬರ್‍ನ ನಿಲುವುಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ ಎಂದು ಚಿದ್ವಿಲಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್, ಖಜಾಂಚಿ ರವಿ ಉತ್ತಪ್ಪ, ರಾಜ್ಯ ಸಮಿತಿ ನಿರ್ದೇಶಕ ಗಿರೀಶ್ ಗಣಪತಿ ಹಾಗೂ ನಗರಾಧ್ಯಕ್ಷ ಅಧ್ಯಕ್ಷ ಬಿ.ಎಂ.ಧನಂಜಯ್ ಉಪಸ್ಥಿತರಿದ್ದರು.