ವಿವಿಧ ಬೇಡಿಕೆ ಈಡೇರಿಸಲು ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ ಆಗ್ರಹ

June 26, 2020

ಮಡಿಕೇರಿ ಜೂ. 26 : ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ, ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ (ಸಿಐಟಿಯು ಸಂಯೋಜಿತ) ಜಿ. ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಪ್ರಿಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಈ ಸಂದರ್ಭ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಕೊಡಗು ಜಿಲ್ಲೆಯ ಮೂರು ತಾಲೂಕುಗಳಲ್ಲಿರುವ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ನಾನ್ ಕ್ಲೀನಿಂಗ್ ಮತ್ತು ಡಿ ಗ್ರೂಪ್ ನೌಕರರು, ಆಂಬ್ಯುಲೆನ್ಸ್ ಚಾಲಕರು, ಸೆಕ್ಯುರಿಟಿ ಗಾರ್ಡ್ ಹಾಗೂ ಇನ್ನಿತರ ರಂಗದಲ್ಲಿ ದುಡಿಯುತ್ತಿರುವ ನೌಕರರಿಗೆ ಈಗಾಗಲೇ ನೀಡುತ್ತಿರುವ ವೇತನ ಅತ್ಯಂತ ಕಡಿಮೆಯಾಗಿದ್ದು, ಹೆಚ್ಚು ಒತ್ತಡದಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ ಎಂದರು.
ಆದರೆ ಸರ್ಕಾರ ನೌಕರರಿಗೆ ಸರಿಯಾದ ವೇತನ ನೀಡದೆ ಇರುವುದರಿಂದ ನೌಕರರು ತಮ್ಮ ದೈನಂದಿನ ಖರ್ಚಿಗೆ ಪರಿತಪಿಸುತ್ತಿದ್ದು, ಒಷ್ಟೊತ್ತಿನ ಆಹಾರಕ್ಕೂ ಪರರಲ್ಲಿ ಕೈ ಚಾಚುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸಾರ ವ್ಯಕ್ತಪಡಿಸಿದರು.
ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಮಗೆ ನೀಡಿರುವುದಕ್ಕಿಂತಲೂ ಅಧಿಕ ಸಮಯಗಳ ಕಾಲ ದುಡಿಯುತ್ತಿರುವ ನೌಕರರು ಲಾಕ್ ಡೌನ್ ನಡುವೆ ಬಸ್‍ಗಳಿಲ್ಲದೆ ಆಟೋ ಮತ್ತು ಕಾರುಗಳಿಗೆ ದುಬಾರಿ ಬಾಡಿಗೆ ನೀಡಿ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ಸರ್ಕಾರ ಕೊರೋನಾ ವಾರಿಯರ್ಸ್ ಎಂದು ಪ್ರಮಾಣ ಪತ್ರ ನೀಡಿ ಗೌರವ ನೀಡಿದೆ ಹೊರತು ಅವರ ಜೀವನ ನಿರ್ವಹಣೆಗೆ ಬೇಕಾದ ಯಾವುದೇ ಆದಾಯವನ್ನು ನೀಡಿಲ್ಲ ಎಂದು ದೂರಿದರು.
ಸಂಘಟನೆ ವತಿಯಿಂದ ಪ್ರತಿಭಟನೆಯ ಎಚ್ಚರಿಕೆ ನೀಡಿದ ಮೇಲೆ ಗುತ್ತಿಗೆ ನೌಕರರಿಗೆ ಎರಡು ತಿಂಗಳ ವೇತನವನ್ನು ಮತ್ತು ಕೆಲವು ಕಾರ್ಮಿಕರ ಪಿ.ಎಫ್ ಹಣವನ್ನು ಖಾತೆಗೆ ಹಾಕಿರುವ ಬಗ್ಗೆ ಸಂಘಟನೆಗೆ ತಿಳಿಸಲಾಗಿದೆ. ಆದರೆ ನೌರರ ಇನ್ನೂ ಕೆಲವು ಬೇಡಿಕೆಗಳು ಉಳಿದುಕೊಂಡಿದ್ದು, ಅವುಗಳನ್ನು ಅದಷ್ಟು ಶೀಘ್ರ ಈಡೇರಿಸುವಂತೆ ಒತ್ತಾಯಿಸಿದರು.
ಬೇಡಿಕೆಗಳು :
ಜಿಲ್ಲೆಯ ಕುಟ್ಟ, ಗೋಣಿಕೊಪ್ಪ, ಪಾಲಿಬೆಟ್ಟ, ನಾಪೋಕ್ಲು, ಚೆನ್ನಯ್ಯನಕೋಟೆ, ಮೂರ್ನಾಡು ಸೇರಿದಂತೆ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕ್ಲೀನಿಂಗ್ ಮತ್ತು ಡಿ ಗ್ರೂಪ್ ನೌಕರರ ಮೂರು ತಿಂಗಳ ವೇತನ ಬಾಕಿ ಇದ್ದು, ಸಂಬಂಧ ಪಟ್ಟ ಗುತ್ತಿಗೆದಾರರನ್ನು ಕರೆಸಿ ಬಾಕಿ ವೇತನ ಶೀಘ್ರದಲ್ಲಿ ಕೊಡಿಸಬೇಕು, ಕೊರೋನಾ ಕಾಲದ ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರು ಆಟೋ ಮತ್ತು ಇನ್ನಿತರ ವಾಹನಗಳಲ್ಲಿ ದುಬಾರಿ ದರ ಕೊಟ್ಟು ವೃತ್ತಿಗೆ ಹಾಜರಾಗಿದ್ದು, ಅವರ ವಾಹನದ ಬಾಡಿಗೆಯನ್ನು ಆಸ್ಪತ್ರೆ ಸಮಿತಿ ಪಾವತಿಸಿ ಬೇಕು, ಕೂಡಲೇ ಪಿಎಫ್ ಮತ್ತು ಇಎಸ್‍ಐ ಸೌಲಭ್ಯ ಒದಗಿಸಬೇಕು. ಕೊರೊನಾ ಕಾಲದಲ್ಲಿ ಹೆಚ್ಚುವರಿ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಸಕ್ತ ವೇತನದ ಎರಡು ಪಟ್ಟು ವೇತನ ನೀಡಬೇಕು, ಕಾರ್ಮಿಕರಿಗೆ ವರ್ಷಕ್ಕೆ ನೀಡ ಬೇಕಿರುವ ಸಮವಸ್ತ್ರ, ಜರ್ಕಿನ್, ಗ್ಲೌಸ್ ಮುಂತಾದವುಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ನೀಡಿಬೇಕು, ಮಾಸಿಕ ರೂ.18 ಸಾವಿರ ವೇತನ ನೀಡಬೇಕು, ಪ್ರತಿ ತಿಂಗಳ ಮಾಸಿಕ ವೇತನವನ್ನು 5ನೇ ತಾರೀಖಿನಂದ ಸಮರ್ಪಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ನೀಡುವ ಸಂದರ್ಭ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹೆಚ್.ಜಾನಕಿ ಹಾಜರಿದ್ದರು.

error: Content is protected !!