ಅವಹೇಳನ ಆರೋಪ : ವಿ.ಪಿ.ಶಶಿಧರ್ ವಿರುದ್ಧ ಬಿಜೆಪಿ ಪ್ರತಿಭಟನೆ

26/06/2020

ಮಡಿಕೇರಿ ಜೂ.26 : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪ್ರಮುಖ ವಿ.ಪಿ.ಶಶಿಧರ್ ಅವರು ಅವಹೇಳನಕಾರಿಯಾಗಿ ನಿಂದಿಸಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಶುಕ್ರವಾರ ಬಿಜೆಪಿ ಕಾರ್ಯಕರ್ತರು ಸಾಂಕೇತಿಕ ಪ್ರತಿಭಟನೆ ನಡೆಸಿ ಮಡಿಕೇರಿ ನಗರ ಠಾಣೆಯಲ್ಲಿ ಶಶಿಧರ್ ವಿರುದ್ಧ ದೂರು ನೀಡಿದರು. ತಕ್ಷಣ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
::: ಗೋಣಿಕೊಪ್ಪದಲ್ಲಿ ಪ್ರತಿಭಟನೆ :::
ಪ್ರಧಾನಿ ಮೋದಿ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದನೆ ಮಾಡಿರುವ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ವೀರಾಜಪೇಟೆ ಮಂಡಲ ಬಿಜೆಪಿ ನೇತೃತ್ವದಲ್ಲಿ ಗೋಣಿಕೊಪ್ಪದಲ್ಲಿ ಪ್ರತಿಭಟನೆ ನಡೆಯಿತು.
ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಪ್ರಮುಖರು ಹಾಗೂ ಕಾಯಕರ್ತರು ಪೊಲೀಸರಿಗೆ ದೂರು ನೀಡಿ ಶಶಿಧರ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ತಾಲೂಕು ಅಧ್ಯಕ್ಷ ಚಲನ್ ಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾದ ಪ್ರಧಾನ ಮಂತ್ರಿಗಳನ್ನು ಹಾಗೂ ಅವರಿಗೆ ಜನ್ಮ ಕೊಟ್ಟ ತಾಯಿಯನ್ನು ಅಸಹ್ಯವಾಗಿ ನಿಂದಿಸಿರುವ ಶಶಿಧರ್ ವಿರುದ್ಧ ಕೇಸು ದಾಖಲಿಸಬೇಕು. ಇಲ್ಲದಿದ್ದಲ್ಲಿ ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ಆರ್ ಎಂ ಸಿ ಅಧ್ಯಕ್ಷ ಅಧ್ಯಕ್ಷ ಪ್ರವೀಣ್, ಉಪಾಧ್ಯಕ್ಷೆ ಸುಶೀಲಾ, ವರ್ತಕ ಪ್ರಕೋಷ್ಟದ ತಾಲೂಕ ಅಧ್ಯಕ್ಷ ಪ್ರವೀಣ್ ಉತ್ತಪ್ಪ, ತಾಲೂಕು ಉಪಾಧ್ಯಕ್ಷ ಕೆ. ಗಿರಿ, ಸಿ ಸುಬ್ರಮಣಿ, ಕಿಲನ್ ಗಣಪತಿ ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.