ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗ್ನಿಶಾಮಕ ದಳ ಸನ್ನದ್ಧ

26/06/2020

ಮಡಿಕೇರಿ ಜೂ.26 : ಜಿಲ್ಲೆಯಾದ್ಯಂತ ಮುಂಗಾರು ಆರಂಭಗೊಂಡಿದ್ದು, ಪ್ರಾಕೃತಿಕ ವೀಕೋಪ ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ಇಲಾಖೆಯು ಸನ್ನದ್ಧವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ತಿಳಿಸಿದ್ದಾರೆ.
2018 ಮತ್ತು 2019 ರಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಆಸ್ತಿ-ಪಾಸ್ತಿ ಮತ್ತು ಜೀವ ಹಾನಿಗಳು ಸಂಭವಿಸಿದ್ದವು. ಈ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ಅಗ್ನಿ ಶಾಮಕ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಗತ್ಯ ತಾಲೀಮು ನೀಡಲಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಯವರು ಮಾಹಿತಿ ನಿಡಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 4 ಅಗ್ನಿಶಾಮಕ ಠಾಣೆಗಳು ಮಡಿಕೇರಿ, ಗೋಣಿಕೊಪ್ಪ, ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯಿಂದ ಮತ್ತು ಜಿಲ್ಲಾಡಳಿತದಿಂದ ಬೋಟ್‍ಗಳು, ಲೈಫ್ ಜಾಕೆಟ್‍ಗಳು ಸೇರಿದಂತೆ ಅವಶ್ಯ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ಕಳೆದ 2 ವರ್ಷಗಳ ಅನುಭವದಿಂದಾಗಿ ಈ ಬಾರಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮೊದಲೇ ಜನರ ಸ್ಥಳಾಂತಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ತರಬೇತಿಗೊಳಿಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ನೀರಿನಲ್ಲಿಳಿದು ಕಾರ್ಯನಿರ್ವಹಿಸಲು ಲೈಫ್ ಜಾಕೆಟ್‍ಗಳನ್ನು ಸಹ ಒದಗಿಸಲಾಗಿದೆ ಎಂದು ಪಿ.ಚಂದನ್ ಅವರು ತಿಳಿಸಿದ್ದಾರೆ.
ಇಲಾಖೆಯಿಂದ ಬೋಟ್‍ಗಳನ್ನು ಒದಗಿಸಿರುವುದರಿಂದ ಬೋಟ್ ಚಾಲನೆಯ ಬಗ್ಗೆ ಪ್ರತಿಯೊಬ್ಬ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಇದರೊಂದಿಗೆ ಪರಿಸ್ಥಿತಿಯನುಸಾರ ಪ್ರಥಮ ಚಿಕಿತ್ಸೆ ಮಾಡುವ ಬಗ್ಗೆ, ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆಯೂ ಸಹ ತಾಲೀಮು ನೀಡಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯವರು ತಿಳಿಸಿದ್ದಾರೆ.
ಎನ್‍ಡಿಆರ್‍ಎಫ್, ಪೊಲೀಸ್ ಇಲಾಖೆ, ಹೋಂಗಾಡ್ರ್ಸ್ ಮತ್ತು ಅಗಿಶಾಮಕ ಇಲಾಖೆಯು ಜಂಟಿಯಾಗಿ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಂಟಿ ಅಭ್ಯಾಸ ನಡೆಸಲಾಗಿದೆ. ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಈ ಜಂಟಿ ತಾಲೀಮು ನಡೆಸಲಾಗಿದೆ. ಈ ಸಂದರ್ಭ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಮತ್ತು ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯ ಬಗ್ಗೆ ತರಬೇತಿ ನೀಡಲಾಗಿದೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ ಸುಮನ್ ಅವರು ಸಹ ತರಬೇತಿ ಸಂದರ್ಭ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ಅವರು ತಿಳಿಸಿದ್ದಾರೆ.
ಇದರೊಂದಿಗೆ ಉದಯಗಿರಿ ಗುಡ್ಡ ಕುಸಿತ ಪ್ರದೇಶದಲ್ಲಿಯೂ ಸಹ ಭೂಕುಸಿತ ಸಂದರ್ಭ ರೋಪ್ ಬಳಕೆಯ ಬಗ್ಗೆ ಮತ್ತು ತೊಂದರೆಗೊಳಗಾದವರನ್ನು ರಕ್ಷಿಸುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ. ಕೋವಿಡ್-19 ರ ತುರ್ತು ಪರಿಸ್ಥಿತಿಯ ಸಂದರ್ಭ ಮಳೆಗಾಲವನ್ನು ನಿರ್ವಹಿಸಬೇಕಿದ್ದು ಮಳೆಗಾಲದ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಅಗ್ನಿಶಾಮಕ ಇಲಾಖೆ ಸಜ್ಜಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಪಿ.ಚಂದನ್ ಅವರು ತಿಳಿಸಿದ್ದಾರೆ.