ಮಾದಕ ವಸ್ತು ವಿರೋಧಿ ದಿನ : ದುಶ್ಚಟದಿಂದ ದೂರವಿರಲು ಆರ್.ಸಂಪತ್ ಕುಮಾರ್ ಸಲಹೆ

26/06/2020

ಮಡಿಕೇರಿ ಜೂ.26 : ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಆರ್. ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ.
ನಗರದ ಶಕ್ತಿಧಾಮ ಮಾದಕ ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರ ದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಆರ್. ಸಂಪತ್ ಕುಮಾರ್ ಅವರು ವಿವರಿಸಿದರು. ಮಾದಕ ವ್ಯಸನಗಳಿಗೆ ತುತ್ತಾದವರು ಈ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ಪಡೆದುಕೊಂಡು ಕುಟುಂಬದೊಂದಿಗೆ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದು ಅವರು ಹೇಳಿದರು.
ಶಸ್ತ್ರ ಚಿಕಿತ್ಸಕರಾದ ಡಾ.ವಿ.ಎಸ್. ಸತೀಶ್ ಅವರು ಮಾತಾನಾಡಿ, ಸಮಾಜದಲ್ಲಿ ಇಂದಿನ ಯುವಕರು ಮಾದಕ ವಸ್ತು ಸೇವನೆಯ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಆದ ಕಾರಣ ಪೋಷಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇಂತಹ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಬೇಕು.
ಇಂದು ಸಮಾಜ ಕಣ್ಣಿಗೆ ಕಾಣದಿರುವ ಕೋರಾನ ವೈರಸ್ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಮದ್ಯಪಾನ ವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಈ ಮಾದಕ ವ್ಯಸನದ ಚಟದಿಂದ ದೂರವಾಗಿ ತಮ್ಮ ಕುಟುಂಬದವರು ಸಮಾಜದಲ್ಲಿ ಇಂತಹ ಚಟಗಳಿಗೆ ಬಲಿಯಾದವರಿಗೆ ಬುದ್ಧಿ ಹೇಳಿ ವ್ಯಸನ ಮುಕ್ತರಾಗಿಸಿ. ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಂತವರಾಗಬೇಕು. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ದೈಹಿಕ ಮಾನಸಿಕ ಸಾಮಥ್ರ್ಯವನ್ನು ಕುಂಠಿತಗೊಳಿಸುತ್ತದೆ ಮತ್ತು ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಯುವಕರ ಪ್ರಮಾಣ ಹೆಚ್ಚಿದೆ, ಇಂತಹ ಮಾದಕ ವಸ್ತುಗಳ ಸೇವನೆಗೆ ತುತ್ತಾದಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ. ಜನರು ಮಾದಕ ವಸ್ತು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಪದಾರ್ಥಗಳನ್ನು ಬಳಸುವುದರಿಂದ ಮಾನಸಿಕ ಖಿನ್ನತೆ, ನಿದ್ರಾಹೀನತೆ ಸೇರಿದಂತೆ ಗಂಭೀರವಾದ ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದುಶ್ಚಟಗಳಿಂದ ದೂರವಿರುವಂತೆ ಅವರು ಸಲಹೆ ನೀಡಿದರು.
ಫ್ಯಾಮಿಲಿ ಫಿಸಿಷಿಯನ್ ಮತ್ತು ಮಕ್ಕಳ ತಜ್ಞರಾದ ಡಾ.ಶಿಲ್ಪ ಸತೀಶ್ ಮಾತಾನಾಡಿ, ಮಾದಕ ವಸ್ತುಗಳ ಚಟಕ್ಕೆ ದಾಸರಾದರೆ, ಸಮಸ್ಯೆ ಕಚಿತ. ಮಾದಕ ವಸ್ತುಗಳನ್ನು ಉಪಯೋಗಿಸುವುದರಿಂದ ರಕ್ತ ಸಂಬಂಧ ಕಾಯಿಲೆಗಳು ದೇಹದ ಅಂಗಾಂಗ ಸಮಸ್ಯೆಗಳು ಮೂರ್ಛೆ ಹೋಗುವುದು, ಭ್ರಮೆ ಉಂಟಾಗುವುದು ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಉಪನ್ಯಾಸಕರಾದ ಪರಶುರಾಮ್ ಅವರು ಮಾತಾನಾಡಿ, ಮನಸಿದ್ದರೆ ಮಾರ್ಗ ಎಂಬ ಮಾತಿದೆ. ಸಧೃಡ ಮನಸಿನಲ್ಲಿ ಸಧೃಡ ನಿರ್ಧಾರ ಮಾಡಿ ವ್ಯಸನ ಮುಕ್ತರಾಗಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಾಗಿ ತಿಳಿಸಿದರು. ದುಶ್ಚಟಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ಕೌಟುಂಬಿಕವಾಗಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ ಕಾರಣ ವ್ಯಸನ ಮುಕ್ತರಾಗಿ ಸಮಾಜದಲ್ಲಿ ದುಶ್ಚಟಗಳ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗುವಂತೆ ಕರೆ ನೀಡಿದರು.
ಕಾರ್ಯಕ್ರಮದ ನಿರುಪಣೆ ಮತ್ತು ಸ್ವಾಗತವನ್ನು ಶಕ್ತಿಧಾಮದ ಯೋಜನಾ ನಿರ್ದೇಶಕರಾದ ಪ್ರಭು ನೆರವೇರಿಸಿದರು. ಸತೀಶ್ ವಂದಿಸಿದರು.