4 ಕೋಟಿ ಮೌಲ್ಯದ ಚೀನಾ ಸರಕು ವಶ

27/06/2020

ಬೆಂಗಳೂರು ಜೂ.27 : ಚೀನಾದ ವುಹಾನ್ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಉದ್ಯಮದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಗೋದಾಮಿನಿಂದ ಬರೊಬ್ಬರಿ 4 ಕೋಟಿ ರೂ. ಮೌಲ್ಯದ ಚೀನಾ ಸರಕುಗಳನ್ನು ವಶಕ್ಕೆ ಪಡೆದಿದ್ದಾರೆ.
ಚೀನಾ ವ್ಯಕ್ತಿಗೆ ಸಂಬಂಧಿಸಿದ 60 ಜಿಎಸ್ ಟಿ ನೋಂದಣಿಗಳನ್ನು ಹೊಂದಿದ್ದ ಸಂಸ್ಥೆಗಳ ಗೋದಾಮಿನ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 25,446 ಚೀನಾ ಉತ್ಪಾದಿತ ಎಲೆಕ್ಟ್ರಾನಿಕ್ ಹಾಗೂ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಸರಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಈ ದಾಳಿ ನಡೆದಿದೆ ಎಂದು ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಭೋಗ್ಯಕ್ಕೆ ಪಡೆದ ಪ್ರದೇಶದಲ್ಲಿ ವ್ಯಕ್ತಿಯೋರ್ವ ಜಿಎಸ್ ಟಿ ಕಾಯ್ದೆಯಡಿ ಕೇಂದ್ರ ಹಾಗೂ ರಾಜ್ಯದ ವ್ಯಾಪ್ತಿಯಲ್ಲಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಚೀನಾ ಉತ್ಪಾದಿತ ಸರಕುಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಲು 60 ಸಂಸ್ಥೆಗಳ ನೋಂದಣಿಗಳನ್ನು ಮಾಡಿಸಿದ್ದ. ಆದರೆ ಈ ಪೈಕಿ ಹಲವು ಸಂಸ್ಥೆಗಳ ನೋಂದಣಿ ಅಕ್ರಮವಾಗಿದ್ದದ್ದು ಬೆಳಕಿಗೆ ಬಂದಿದೆ.