ಭಾರತದ ಭೂಪ್ರದೇಶ ಅತಿಕ್ರಮಣವಾಗಿದೆ !

27/06/2020

ನವದೆಹಲಿ ಜೂ.27 : ಭಾರತದ ಯಾವುದೇ ಭೂ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದ್ದೀಯಾ ಎಂಬುದರ ಬಗ್ಗೆ ದೇಶದ ಜನತೆಗೆ ಸತ್ಯವನ್ನು ಹೇಳುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ದೇಶದ ಭೂ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನ ಮಂತ್ರಿ ಹೇಳುತ್ತಿದ್ದರೆ ಸ್ಯಾಟಲೈಟ್ ಫೋಟೋಗಳು ಬೇರೆ ರೀತಿಯಲ್ಲಿವೆ. ಹಾಗಾದರೆ ಮೋದಿ ಅವರ ಹೇಳಿಕೆಯಿಂದ ನೆರೆಯ ರಾಷ್ಟ್ರ ಚೀನಾ ಲಾಭ ಪಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹುತಾತ್ಮ ಭಾರತೀಯ ಯೋಧರ ಗೌರವಾರ್ಥ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಚಾಂದೋಲನದ ಭಾಗವಾಗಿ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ದೇಶದ ಒಂದು ಇಂಚು ಭೂ ಪ್ರದೇಶವನ್ನು ಯಾರೊಬ್ಬರಿಗೂ ನೀಡಿಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಆದರೆ, ಪೂರ್ವ ಲಡಾಖ್ ನಲ್ಲಿ ಮೂರು ಪಾಯಿಂಟ್ ಗಳಷ್ಟು ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಪರಿಣಿತರು ಹಾಗೂ ಸ್ಯಾಟಲೈಟ್ ಫೋಟೋಗಳು ತೋರಿಸುತ್ತಿವೆ. ಇಡೀ ದೇಶ ಪ್ರಧಾನಿ ಜೊತೆಗಿದ್ದು, ಚೀನಾದ ವಿರುದ್ಧ ಒಗ್ಗಟ್ಟಾಗಿ ಹೋರಾಡಿ ಅವರನ್ನು ಹೊರಗೆ ಅಟ್ಟಬೇಕಾಗಿದೆ ಎಂದಿದ್ದಾರೆ.