ವಿಪಕ್ಷಗಳ ಸಲಹೆ ಪಡೆಯುತ್ತೇವೆ

27/06/2020

ಬೆಂಗಳೂರು ಜೂ.27 : ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ವಿಪಕ್ಷಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೋವಿಡ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜರುಗಿದ ಸರ್ವಪಕ್ಷ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ಪ್ರಸ್ತಾಪ ಇಲ್ಲ ಎಂದರು .
ಬೆಂಗಳೂರಲ್ಲಿ ಲಾಕ್ ಡೌನ್ ಬೇಡ, ಆದರೆ ಸೀಲ್ ಡೌನ್ ಮಾಡಿ ಮತ್ತಷ್ಟು ಬಿಗಿ ಕ್ರಮಕೈಗೊಳ್ಳಬೇಕು. ಎಲ್ಲಾ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕೊರೋನಾ ನಿಯಂತ್ರಿಸಬೇಕು ಎಂಬ ನಿಟ್ಟಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇಡೀ ಬೆಂಗಳೂರು ಲಾಕ್ ಡೌನ್ ಬಗ್ಗೆ ಯಾವುದೇ ಆತುರದ ನಿರ್ಧಾರ ಬೇಡ. ಎಸ್.ಎಸ್.ಎಲ್.ಸಿ ಪರೀಕ್ಷೆಯು ನಡೆಯುತ್ತಿದೆ. ಈಗಾಗಲೇ ಲಾಕ್ ಡೌನ್ ನಿಂದ ಬಾರಿ ನಷ್ಟವಾಗಿದ್ದು, ಸರ್ಕಾರದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಈಗ ಮತ್ತೆ ಲಾಕ್ ಡೌನ್ ಮಾಡಿದರೆ ಸರ್ಕಾರದ ಆರ್ಥಿಕ ಸುಧಾರಣೆ ಮಾಡಲು ತುಂಬಾ ಕಷ್ಟ ಆಗಲಿದೆ ಎಂದರು.