ಕೊಡಗಿನಲ್ಲಿ ಪೊಲೀಸ್ ದೌರ್ಜನ್ಯ ಆರೋಪ : ಅಲ್ಪಸಂಖ್ಯಾತರ ಘಟಕದಿಂದ ಕೆ.ಪಿ.ಸಿ.ಸಿ. ಅಧ್ಯಕ್ಷರ ಭೇಟಿ

27/06/2020

ಮಡಿಕೇರಿ ಜೂ.27 : ಅಲ್ಪಸಂಖ್ಯಾತ ಮುಖಂಡರು ಸೇರಿದಂತೆ ಕಾಂಗ್ರೆಸ್ ಪ್ರಮುಖರನ್ನು ಗುರಿಯಾಗಿಸಿಕೊಂಡು ಕೊಡಗು ಜಿಲ್ಲೆಯ ಪೊಲೀಸರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಈ ಸಂಬಂಧ ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆ.ಪಿ.ಸಿ.ಸಿ.) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್ ಅವರ ನೇತೃತ್ವದಲ್ಲಿ ತೆರಳಿದ ಪ್ರಮುಖರ ನಿಯೋಗ, ಮೊದಲು ಕೆ.ಪಿ.ಸಿ.ಸಿ. ಅಧ್ಯಕ್ಷರನ್ನು ಭೇಟಿ ಮಾಡಿ, ಕಾಂಗ್ರೆಸ್ ಮುಖಂಡರನ್ನು ಗುರಿಯಾಗಿಸಿಕೊಂಡು ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿತು.
ಕೊಡಗಿನಲ್ಲಿ ಪೊಲೀಸರಿಂದ ಸೂಕ್ತ ನ್ಯಾಯ ದೊರೆಯುತ್ತಿಲ್ಲ. ಅದರಲ್ಲೂ ಮುಖ್ಯವಾಗಿ ವೀರಾಜಪೇಟೆ ಡಿವೈಎಸ್ಪಿ, ಕಾಂಗ್ರೆಸ್ ಮುಖಂಡರನ್ನು ಅನಗತ್ಯವಾಗಿ ಗುರಿಯಾಗಿಸಿಕೊಂಡು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಮುಖಂಡರು ಸುಳ್ಳು ಪ್ರಕರಣಕ್ಕೆ ಬಲಿಯಾಗುತ್ತಿದ್ದಾರೆ ಎಂದು ನಿಯೋಗದಲ್ಲಿದ್ದ ಪ್ರಮುಖರು ಡಿ.ಕೆ. ಶಿವಕುಮಾರ್ ಬಳಿ ದೂರಿದರು.
ಇತ್ತೀಚೆಗೆ ನಡೆದ ಎರಡು ಪ್ರಕರಣಗಳಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಮತ್ತು ವೀರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯ ಪಲ್ವಿನ್ ಪೂಣಚ್ಚ ಅವರ ವಿರುದ್ಧ ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಅವರ ಸೂಚನೆಯಂತೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಇದು ಉದ್ದೇಶಪೂರ್ವಕವಾಗಿ ಪೊಲೀಸರು ನಡೆಸಿದ ಕಾನೂನಿನ ದುರ್ಬಳಕೆಯಾಗಿದೆ. ವೀರಾಜಪೇಟೆ ಡಿವೈಎಸ್ಪಿ ಮತ್ತು ತಾಲೂಕಿನ ಕೆಲ ಪೊಲೀಸ್ ಅಧಿಕಾರಿಗಳು ಬಿಜೆಪಿಯವರ ಕೈಗೊಂಬೆಗಳಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಕೆಲವು ತಿಂಗಳ ಹಿಂದೆ ಗುಂಡಿಕೆರೆಯ ಮೂಸಾ ಎಂಬುವರು ನಿಗೂಢವಾಗಿ ಕಾಣೆಯಾಗಿದ್ದ ಸಂದರ್ಭದಲ್ಲಿ ಅವರನ್ನು ಹುಡುಕುವ ವಿಚಾರದಲ್ಲಿ ಬಾಳುಗೋಡಿನಲ್ಲಿ ಗುಂಪೊಂದರಿಂದ ಹಲ್ಲೆಗೊಳಗಾದ ವ್ಯಕ್ತಿಗಳ ವಿರುದ್ಧವೇ ವೀರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಅನ್ಯಾಯವೆಸಗಿದ್ದಾರೆ. ಇತ್ತೀಚೆಗೆ ಶನಿವಾರಸಂತೆಯಲ್ಲಿ ಅಲ್ಪಸಂಖ್ಯಾತ ವ್ಯಕ್ತಿಯೊಬ್ಬರ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಗಳ ಕುರಿತು ಮಾಹಿತಿ ಇದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಕೊಡಗು ಪೊಲೀಸರಿಂದ ಅಲ್ಪಸಂಖ್ಯಾತರಿಗೆ ಮತ್ತು ಕಾಂಗ್ರೆಸ್ಸಿಗರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ಪ್ರಮುಖರು ಡಿ.ಕೆ. ಶಿವಕುಮಾರ್ ಅವರ ಗಮನಸೆಳೆದರು.
ರಾಜ್ಯ ಮಟ್ಟದಲ್ಲಿ ಪ್ರತಿಭಟನೆ: ಪೊಲೀಸರ ಏಕಪಕ್ಷೀಯ ನಡೆ ತೀರಾ ಖಂಡನೀಯ. ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರು ಆಳುವವರ ಕೈಗೊಂಬೆಗಳಾಗಿ ವರ್ತಿಸಬಾರದು. ಇದೀಗ ಕಾಂಗ್ರೆಸ್ ಮುಖಂಡರ ಮತ್ತು ಕಾರ್ಯಕರ್ತರ ವಿರುದ್ಧ ಪೊಲೀಸರ ಪಕ್ಷಪಾತ ಧೋರಣೆಯನ್ನು ಬದಲಿಸದಿದ್ದಲ್ಲಿ ಇದರ ಕುರಿತು ರಾಜ್ಯ ಮಟ್ಟದಲ್ಲಿ ಧ್ವನಿಯೆತ್ತಿ ಪ್ರತಿಭಟಿಸಬೇಕಾಗುತ್ತದೆ ಎಂದು ನಿಯೋಗದ ಪ್ರಮುಖರಿಗೆ ಡಿ.ಕೆ. ಶಿವಕುಮಾರ್ ತಿಳಿಸಿದರಲ್ಲದೆ, ಕೊಡಗು ಪೊಲೀಸರ ದೌರ್ಜನ್ಯದ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ದೂರು ನೀಡುವಂತೆ ಸೂಚಿಸಿದರು.
ಅಧಿಕಾರಿಗೆ ದೂರು: ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರನ್ನು ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿದ ಇದೇ ನಿಯೋಗ, ಕೊಡಗಿನಲ್ಲಿ ಅಲ್ಪಸಂಖ್ಯಾತರ ಮತ್ತು ಕಾಂಗ್ರೆಸ್ ಪ್ರಮುಖರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಕುರಿತು ದೂರು ನೀಡಿ, ಸಂಬಂಧಿಸಿದ ಪ್ರಕರಣಗಳ ಕುರಿತು ಮಾಹಿತಿ ನೀಡಿತು.
ದೂರನ್ನು ಸ್ವೀಕರಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಈ ಕುರಿತು ಸಂಬಂಧಿಸಿದವರಿಂದ ವರದಿ ತರಿಸಿಕೊಂಡು ಪರಿಶೀಲಿಸಲಾಗುವುದು.ಈ ವೇಳೆ ಪೊಲೀಸರಿಂದ ಅನ್ಯಾಯವಾಗಿರುವುದು ದೃಢಪಟ್ಟರೆ ಯಾವುದೇ ಮುಲಾಜಿಲ್ಲದೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಕಾನೂನಿನಂತೆ ಜನರ ರಕ್ಷಕರಾಗಿ ಕೆಲಸ ನಿರ್ವಹಿಸಬೇಕಾಗಿರುವುದು ಪ್ರತಿ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕರ್ತವ್ಯ. ಕೆಲಸ ನಿರ್ವಹಣೆ ವೇಳೆ ಯಾವುದೇ ಒತ್ತಡಕ್ಕೆ ಪೊಲೀಸರು ಮಣಿಯುವಂತಿಲ್ಲ. ಪೊಲೀಸರು ಯಾವುದೇ ಪ್ರಕರಣದಲ್ಲಿ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಅನಗತ್ಯವಾಗಿ ಯಾವುದೇ ಪ್ರಕರಣದಲ್ಲಿ ಅಮಾಯಕರ ಹೆಸರು ಸೇರಿಸಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ನಿಯೋಗದಲ್ಲಿದ್ದ ಪ್ರಮುಖರಿಗೆ ತಿಳಿಸಿದ ಡಿ.ಜಿ.ಪಿ. ಪ್ರವೀಣ್ ಸೂದ್ ಅವರು, ಈ ಕುರಿತು ಪರಿಶೀಲಿಸುವಂತೆ ತಮ್ಮ ಕಚೇರಿಯಿಂದಲೇ ಸಂಬಂಧಿಸಿದ ಎ.ಡಿ.ಜಿ.ಪಿ.ಯವರಿಗೆ ಕರೆ ಮಾಡಿ ನಿರ್ದೇಶನ ನೀಡಿದರು.
ನಂತರ ಈ ನಿಯೋಗ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಸೈಯದ್ ಅಹಮದ್ ಅವರನ್ನು ಭೇಟಿ ಮಾಡಿ ಪೊಲೀಸರಿಂದ ಕೊಡಗಿನಲ್ಲಿ ಅಲ್ಪಸಂಖ್ಯಾತರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ವಿವರಣೆ ನೀಡಿತು.
ಕೆ.ಪಿ.ಸಿ.ಸಿ. ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಕೆ.ಪಿ.ಸಿ.ಸಿ. ಸಂಯೋಜಕ ಶಾಹಿದ್ ತೆಕ್ಕಿಲ್ ಅವರು ಉಪಸ್ಥಿತರಿದ್ದರು. ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಸೈಯ್ಯದ್ ಬಾವ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಕೋಳುಮಂಡ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಖಲೀಲ್ ಬಾಷಾ, ಜಿಲ್ಲಾ ಸಂಯೋಜಕ ಅಬೂಬಕ್ಕರ್ ಕಡಂಗ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಇದ್ದರು.