ಕೊರೋನಾ ಮುನ್ನೆಚ್ಚರಿಕೆ : ಬಂದ್ ಕರೆಗೆ ಮಡಿಕೇರಿಯಲ್ಲಿ ಸ್ಪಂದನೆ

27/06/2020

ಮಡಿಕೇರಿ ಜೂ.27 : ಕೊರೊನಾ ಸೋಂಕು ಕೊಡಗಿನಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ, ನಿಯಂತ್ರಿಸುವ ಪ್ರಯತ್ನವಾಗಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನೀಡಿದ್ದ ಕರೆಯಂತೆ ಶನಿವಾರ ಮಧ್ಯಾಹ್ನದ ಬಳಿಕ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಸಾಕಷ್ಟು ಪಟ್ಟಣ ಪ್ರದೇಶಗಳ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು.
ಕಳೆದೊಂದು ತಿಂಗಳ ಅವಧಿಯಲ್ಲಿ ಕೇವಲ ಮೂರು ಕೋವಿಡ್-19 ಪ್ರಕರಣಗಳಿಗೆ ಸೀಮಿತವಾಗಿದ್ದ ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಪ್ರಕರಣಗಳ ಸಂಖ್ಯೆ ನಲ್ವತ್ತರ ಗಡಿ ತಲುಪಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇದರ ನಿಯಂತ್ರÀಣಕ್ಕೆ ಸಂಚಾರ, ವ್ಯಾಪಾರ ವಹಿವಾಟು ಸ್ಥಗಿತದ ಮೂಲಕ ಜನರ ಸಂಚಾರ ನಿಯಂತ್ರಿಸುವುದೇ ಅಂತಿಮ ಪರಿಹಾರವೆನ್ನುವ ಕಾರಣಗಳ ಹಿನ್ನೆಲೆ ಚೇಂಬರ್ ಕರೆಯಂತೆ ಇಂದಿನಿಂದ ಜು.4 ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯಾಹ್ನದ ಬಳಿಕ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಾಲ್ಕನೇ ಶನಿವಾರವಾದ್ದರಿಂದ ಸರ್ಕಾರಿ ಕಛೇರಿಗಳು ಮುಚ್ಚಲ್ಪಟ್ಟು ಜನ ಸಂಚಾರ ಮಧ್ಯಾಹ್ನದವರೆಗೆ ಕ್ಷೀಣವಾಗಿತ್ತು. ಮಧ್ಯಾಹ್ನದ ಬಳಿಕ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದರಿಂದ ಜನರ ಸಂಚಾರವು ವಿರಳವಾಗಿ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಈ ನಡುವೆ ಕೆಲ ಬಟ್ಟೆ ಅಂಗಡಿಗಳು, ಬೆರಳೆಣಿಕೆಯ ಗೂಡಂಗಡಿ, ತರಕಾರಿ ಅಂಗಡಿಗಳು ತೆರೆಯಲ್ಪಟ್ಟಿದ್ದವಾದರು ವ್ಯಾಪಾರ ವಹಿವಾಟಿಲ್ಲದೆ ಬಣಗುಡುತ್ತಿದ್ದವು.
::: ವೀರಾಜಪೇಟೆ, ಗೋಣಿಕೊಪ್ಪದಲ್ಲಿ ಬಂದ್ ಇಲ್ಲ :::
ಕೊಡಗು ಜಿಲ್ಲ್ಲಾ ಚೇಂಬರ್ ಆಫ್ ಕಾಮರ್ಸ್ ತೆಗೆದುಕೊಂಡ ನಿಲುವಿಗೆ ವೀರಾಜಪೇಟೆ ವರ್ತಕರು ತಮ್ಮ ಸಹಮತ ತೋರದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆಯಲ್ಪಟ್ಟು, ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತಿತ್ತು.
ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಬಂದ್ ನಡೆಸದಿರುವಂತೆ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಒಮ್ಮತದ ನಿರ್ಧಾರ ಕೈಗೊಂಡಿದೆ.
ಜಿಲ್ಲಾ ಚೇಂಬರ್ಸ್ ಆಫ್ ಕಾಮರ್ಸ್‍ನ ಸೂಚನೆ ಮೇರೆಗೆ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಕಡೇಮಾಡ ಸುನಿಲ್ ಮಾದಪ್ಪ ಶನಿವಾರ ತುರ್ತು ಸಭೆ ನಡೆಸಿದರು.
ಹಿರಿಯ ವರ್ತಕರ ಸಲಹೆ ಮೇರೆ ನಗರದಲ್ಲಿ ಎಂದಿನಂತೆ ವರ್ತಕರು ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಲಾಯಿತು. ಕೊರೋನಾ ವೈರಸ್ ಹರಡದಂತೆ ವರ್ತಕರು ತಮ್ಮ ಅಂಗಡಿ, ಮುಂಗಟ್ಟುಗಳಲ್ಲಿ ಸರಕಾರದ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಲಾಯಿತು.