ಸೀಲ್ ಡೌನ್ ಪ್ರದೇಶದ ನಿವಾಸಿಗಳಿಗೆ ಸೌಲಭ್ಯ ಒದಗಿಸಲು ಜೆಡಿಎಸ್ ಒತ್ತಾಯ

27/06/2020

ಮಡಿಕೇರಿ ಜೂ. 27 : ಕೊರೋನಾ ಸೋಂಕಿನಿಂದಾಗಿ ಕೊಡಗಿನಲ್ಲಿ ಸೀಲ್ ಡೌನ್ ಆದ ಪ್ರದೇಶದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಸರ್ಕಾರದಿಂದಲೇ ಪಡಿತರ ಸಾಮಾಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡಬೇಕು ಎಂದು ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಅಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ. ಅಲ್ಲದೇ ಸಿಲ್ ಡೌನ್ ಆದ ಪ್ರದೇಶದಲ್ಲಿ ಅನೇಕ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿದ್ದು ಪಡಿತರ ಸಾಮಾಗ್ರಿಗಳಿಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಸರ್ಕಾರ ಸೀಲ್ ಡೌನ್ ಆದ ಪ್ರದೇಶಕ್ಕೆ ಪಡಿತರ ಸಾಮಾಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಹಾಗೂ ಅಧಿಕಾರಿಗಳು ಜವಾಬ್ದಾರಿಯನ್ನು ಮರೆತ್ತಿದೆ ಎಂದು ಆರೋಪಿಸಿರುವ ಗಣೇಶ್ ನಿರ್ಭಂದಿತ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವಂತಾಗಬೇಕು ಎಂದರು.
ಲಾಕ್ ಡೌನ್ ಸಂದರ್ಭ ಬಡ ಜನರು ಹಸಿವಿನಿಂದ ಸತ್ತರೇ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ದೂರಿದರು.
ಜಿಲ್ಲೆಯಲ್ಲಿ ನಿಷ್ಠಾವಂತ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಎಸ್ ಪಿ ಡಾ. ಸುಮಾನ್ ಡಿ. ಪೆನ್ನೇಕರ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭದ ಜನರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ್ದಾರೆ. ಅಲ್ಲದೆ ಕೊರೋನಾ ಲಾಕ್ ಡೌನ್ ಸಂಕಷ್ಟದಲ್ಲಿ ಕಾರ್ಯನಿರ್ವಹಿಸಿದ್ದು ಜನರ ಸಮಸ್ಯೆ ಬಗ್ಗೆ ಅರಿವಿದೆ. ಆದ್ದರಿಂದ ಕೊರೋನಾ ಸಂಕಷ್ಟ ದೂರ ಆಗುವವರೆಗೆ ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಯುವ ಘಟಕ ಪ್ರಧಾನ ಕಾರ್ಯದರ್ಶಿ ಜಾಸಿರ್, ಜಿಲ್ಲಾ ಕಾರ್ಯದರ್ಶಿ ಸುನೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೊಳ್ಯಂಡ ಗಣೇಶ್ ಹಾಗೂ ಮಡಿಕೇರಿ ನಗರ ಎಸ್ ಸಿ ಘಟಕದ ಅಧ್ಯಕ್ಷ ರವಿ ಕುಮಾರ್ ಉಪಸ್ಥಿತರಿದ್ದರು.