ಪೊನ್ನಂಪೇಟೆಯಲ್ಲಿ ಮೊದಲ ವರ್ಷದ ಬಾಸ್ಕೆಟ್ ಬಾಲ್ ಲೀಗ್ ಪಂದ್ಯಾವಳಿ : ವಿರಾಜಪೇಟೆ ಎವೆಂಜರ್ಸ್ ತಂಡ ಚಾಂಪಿಯನ್

27/06/2020

ಪೊನ್ನಂಪೇಟೆ, ಜೂ.27: ‘ಸ್ಟ್ರೀಟ್ ಬಾಲರ್ಸ್ ಎಸ್.ಎಸ್.ಟಿ. ವಿ.’ ವತಿಯಿಂದ ನಡೆದ ಮೊದಲನೇ ವರ್ಷದ ಬಾಸ್ಕೆಟ್ ಬಾಲ್ ಲೀಗ್  ಪಂದ್ಯಾವಳಿಯಲ್ಲಿ ವಿರಾಜಪೇಟೆಯ ‘ಎವೆಂಜರ್ಸ್’  ತಂಡ ಚೊಚ್ಚಲ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಪೊನ್ನಂಪೇಟೆಯ ಸಂತ ಅಂತೋಣಿ ಪ್ರಾಥಮಿಕ ಶಾಲಾ ಶಾಲೆಯ ಆವರಣದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ‘ಎವೆಂಜರ್ಸ್’ ತಂಡ ಪೊನ್ನಂಪೇಟೆಯ ‘ಕೊಡಗು ನೈಟ್ಸ್’ ತಂಡವನ್ನು ಫೈನಲ್ಸ್  ಪಂದ್ಯದಲ್ಲಿ ಎರಡು ಅಂಕಗಳಿಂದ ಮಣಿಸಿ ವಿನ್ನರ್ಸ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ವಿಜೇತ ತಂಡ ನಿಗದಿತ ಸಮಯದಲ್ಲಿ 37 ಅಂಕಗಳನ್ನು ಪಡೆದರೆ, ಪರಾಜಿತ ತಂಡ 35 ಅಂಕಗಳನ್ನು ಗಳಿಸಿ ಎದುರಾಳಿ ತಂಡದ ಮುಂದೆ ಶರಣಾಗಬೇಕಾಯಿತು.
ಇದಕ್ಕೂ ಮೊದಲು ನಡೆದ ಸೆಮಿ  ಫೈನಲ್ಸ್  ಪಂದ್ಯದಲ್ಲಿ ವಿರಾಜಪೇಟೆಯ ‘ಎವೆಂಜರ್ಸ್’ ತಂಡ ಮಡಿಕೇರಿಯ ‘ಸ್ಪಾರ್ಟನ್ಸ್’  ತಂಡವನ್ನು ಸೋಲಿಸಿ ಫೈನಲ್ಸ್  ಪ್ರವೇಶಿಸಿದರೆ, ರನ್ನರ್ಸ್ ಪ್ರಶಸ್ತಿ ಗೆ ತೃಪ್ತಿಪಟ್ಟುಕೊಂಡ ‘ಕೊಡಗು ನೈಟ್ಸ್’ ತಂಡ ‘ಓಲ್ಡ್ ಸ್ಕೂಲ್’ ತಂಡವನ್ನು ಸೋಲಿಸಿ ಫೈನಲ್ಸ್ ಗೆ ಅರ್ಹತೆ ಪಡೆದುಕೊಂಡಿತ್ತು.
ಪಂದ್ಯಾವಳಿಯಲ್ಲಿ ‘ಕೊಡಗು ನೈಟ್ಸ್’ ತಂಡದ ಮಾಚಯ್ಯ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿ ಪಡೆದರೆ, ಅದೇ ತಂಡದ ರಾಯಲ್ ಜೋಜೋ ‘ಭವಿಷ್ಯದ ಉದಯೋನ್ಮುಖ ಆಟಗಾರ’ ಎಂಬ ವಿಶೇಷ ಮನ್ನಣೆಗೆ ಪಾತ್ರರಾದರು.
ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಒಟ್ಟು ಎಂಟು ತಂಡಗಳು ಭಾಗವಹಿಸಿ ಪ್ರಶಸ್ತಿಗಾಗಿ ಸೆಣಸಾಡಿದವು.