ಕೊರೋನಾ ಮುನ್ನೆಚ್ಚರಿಕೆ : ಸೋಮವಾರಪೇಟೆಯಲ್ಲಿ ಮಧ್ಯಾಹ್ನ ಬಂದ್

27/06/2020

ಸೋಮವಾರಪೇಟೆ ಜೂ.27 : ಕೋವಿಡ್-19 ವೈರಸ್ ಭೀತಿಯಿಂದ ಪಟ್ಟಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ, ಚೇಂಬರ್ ಆಫ್ ಕಾಮರ್ಸ್ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಳಗ್ಗಿನಿಂದ ಪಟ್ಟಣದಲ್ಲಿ ಜನಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನದ ನಂತರ ಪಟ್ಟಣ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಲಾಕ್‍ಡೌನ್ ಸಮಯದಲ್ಲಿ ಪೊಲೀಸರು ಜನರನ್ನು ಮನೆಗೆ ಕಳುಹಿಸಲು ಹರಸಾಹಸ ಪಡಬೇಕಾಗಿತ್ತು. ಆದರೆ ಈಗ ಪಟ್ಟಣದ ಸುತ್ತಮುತ್ತ ಕೋವಿಡ್-19 ಸೋಂಕಿತರು ಕಂಡು ಬಂದ ಹಿನ್ನೆಲೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಮನೆ ಸೇರಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಸುತ್ತಾಡುವುದು ಕಡಿಮೆಯಾಗಿದೆ. ಬೆರಳಣಿಕೆಯ ಸಂಖ್ಯೆಯಲ್ಲಿ ಆಟೋಗಳು ಸಂಚರಿಸಿದವು.

ಸೀಲ್‍ಡೌನ್ ಗ್ರಾಮಗಳಲ್ಲಿ ಪರದಾಟ:ಕೋವಿಡ್ ವೈರಸ್ ಸೋಂಕಿತರು ಕಂಡ ಬಂದ ಕರ್ಕಳ್ಳಿ ಹಾಗು ಬಳಗುಂದ ಗ್ರಾಮವನ್ನು ಶುಕ್ರವಾರದಿಂದ ಸೀಲ್‍ಡೌನ್ ಮಾಡಿದ್ದು, ಶನಿವಾರ ಬೆಳಿಗ್ಗೆ ಜನರು ಹಾಲಿಗಾಗಿ ಪರದಾಡಿದರು. 411 ಮನೆಗಳು ಈ ಸೀಲ್‍ಡೌನ್ ಪ್ರದೇಶದಲ್ಲಿದ್ದು, ಯಾವುದೇ ವಾಹನಗಳು ಗ್ರಾಮದೊಳಗೆ ಬಂದಿಲ್ಲ. ಕೂಲಿ ಕಾರ್ಮಿಕರಿದ್ದಾರೆ. ಹಾಲು ಅತ್ಯಾವಶ್ಯಕವಾಗಿ ಬೇಕಾಗಿದೆ. 24 ಗಂಟೆಯಿಂದಲೂ ಅಗತ್ಯ ವಸ್ತುಗಳು ದೊರೆತ್ತಿಲ್ಲ. ಗ್ರಾಮದ ಪ್ರವೇಶ ದ್ವಾರದಲ್ಲಿ ಹಾಲು ಮತ್ತು ಅಗತ್ಯ ವಸ್ತುಗಳನ್ನು ಇಟ್ಟರೆ ಅಲ್ಲಿಂದಲಾದರೂ ಖರೀದಿ ಮಾಡುತ್ತೇವೆ ಎಂದು ಸ್ಥಳೀಯ ನಿವಾಸಿ ಜಯೇಶ್ ಹೇಳಿದರು.

=====
ಸೀಲ್‍ಡೌನ್ ಪ್ರದೇಶಗಳಿಗೆ ಪೊಲೀಸ್ ಪಾಸ್ ಪಡೆದುಕೊಂಡ ವೆಂಡರ್ಸ್‍ಗಳು ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಾರೆ. ಜನರು ವಸ್ತುಗಳ ಪಟ್ಟಿ ಕೊಟ್ಟರೆ ಮನೆ ಬಾಗಿಲಿಗೆ ಸರಬರಾಜು ಮಾಡುತ್ತಾರೆ. ಗ್ರಾಮ ಪಂಚಾಯಿತಿ ಜವಾಬ್ದಾರಿ ತೆಗೆದುಕೊಳ್ಳಲಿದೆ. ಪೂರ್ಣ ಮಾಹಿತಿಯನ್ನು ಕರಪತ್ರದ ಮೂಲಕ ಜನರಿಗೆ ತಿಳಿಸಲಾಗುವುದು.
-ಗೋವಿಂದರಾಜ್, ತಹಸೀಲ್ದಾರ್, ಸೋಮವಾರಪೇಟೆ.