ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ನಿಡ್ತ ಕೊಪ್ಪಲು ಗ್ರಾಮಸ್ಥರು

29/06/2020

ಮಡಿಕೇರಿ ಜೂ. 29 : ಹಣ ಪಾವತಿಸುವಂತೆ ಬಂದಿದ್ದ ಗ್ರಾಮೀಣ ಒಕ್ಕೂಟದ ಮೈಕ್ರೋ ಫೈನಾನ್ಸ್‍ನ ಸಿಬ್ಬಂದಿಗಳನ್ನು ಕರವೇ ಕಾರ್ಯಕರ್ತರು ಹಾಗೂ ನಿಡ್ತ ಕೊಪ್ಪಲು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮವಾರಪೇಟೆಯ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನರು ಆಂತಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಕೊರೋನಾ ಲಾಕ್‍ಡೌನ್ ನಿಂದಾಗಿ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿರುವ ಸಂದರ್ಭ ಮೈಕ್ರೋ ಪೈನಾನ್ಸ್‍ನ ಸಿಬ್ಬಂದಿಗಳು ಬಂದು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ನಿಯಮದ ಪ್ರಕಾರ ಆಗಸ್ಟ್ 31ರ ವರೆಗೆ ಸಮಯ ಆವಕಾಶ ಕೊಟ್ಟಿದರು ಊರಿಗೆ ಬಂದು ಮಹಿಳೆಯರಿಗೆ ತೊಂದರೆ ಕೊಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಗ್ರಾಮಸ್ಥರು ನಿಯಮ ಉಲ್ಲಂಘಿಸಿ ಹಣ ಪಾವತಿಸುವಂತೆ ಒತ್ತಾಯಿಸಿದರೆ ಗ್ರಾಮಸ್ಥರೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.