ಜು.7 ರ ನಂತರ ಹೊಸ ಮಾರ್ಗಸೂಚಿ

30/06/2020

ಬೆಂಗಳೂರು ಜೂ.30 : ಕೋವಿಡ್ ನಿಯಂತ್ರಣ ತಂಡಕ್ಕೆ ಇನ್ನಷ್ಟು ತಜ್ಞ ವೈದ್ಯರ ನೇಮಕ ಮಾಡಲಾಗುವುದು, ಸೋಂಕು ಲಕ್ಷಣ ಹೊಂದಿರುವವರು ಆಸ್ಪತ್ರೆಗೆ ದಾಖಲಾಗಲು ಆಗಮಿಸಿದರೆ ಪ್ರವೇಶ ನಿರಾಕರಿಸಬಾರದು, ಸೋಂಕು ಪತ್ತೆ ಪರೀಕ್ಷೆಯ ವರದಿಯನ್ನು ಮೊದಲು ಸರ್ಕಾರಕ್ಕೆ ತಿಳಿಸಬೇಕು, ಬೇರಾರಿಗೂ ಮಾಹಿತಿ ಬಹಿರಂಗಪಡಿಸುವಂತಿಲ್ಲ, ಸರ್ಕಾರದ ಆರೋಗ್ಯಾಧಿಕಾರಿ ಮಾಹಿತಿ ಬಿಡುಗಡೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಹರಡುತ್ತಿರುವ ಕೊರೋನಾ ವೈರಾಣು ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಜುಲೈ 7ರ ನಂತರ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಚಿಂತನೆ ಇದೆ. ರಾಜ್ಯದಲ್ಲಿ ವೈರಾಣು ಸೋಂಕು ಪರಿಸ್ಥಿತಿ ಇನ್ನೂ ಆರು ತಿಂಗಳು ಇದೇ ರೀತಿ ಮುಂದುವರಿಯುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೇಳಿದರು.
ತಜ್ಞರ ಸಮಿತಿಯ ವರದಿಯ ಪ್ರಕಾರ, ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಜುಲೈ ಮತ್ತು ಆಗಸ್ಟ್ ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರ ಏರಿಕೆಯಾಗಲಿದೆ ಎಂದು ಸಚಿವರು ಹೇಳಿದರು. ಅಲ್ಲದೆ ಕೇವಲ ಪರೀಕ್ಷೆಯ ಪ್ರಮಾಣ ಮಾತ್ರ ಹೆಚ್ಚಾಗಿಲ್ಲ, ಸೋಂಕಿತರು ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಸಚಿವರು ಒಪ್ಪಿಕೊಂಡರು.