ವನ್ಯಜೀವಿಗಳ ಹಾವಳಿಯಿಂದ ಬೆಳೆಗಾರರಿಗೆ ನಷ್ಟ : ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಗ್ರಹ

30/06/2020

ವಿರಾಜಪೇಟೆ. ಜೂ. 30 : ಕಾಫಿ ತೋಟಗಳು ಸೇರಿದಂತೆ ಕೃಷಿ ಭೂಮಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ವನ್ಯಜೀವಿಗಳ ಉಪಟಳವನ್ನು ನಿಗ್ರಹಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊಡಗು ಜಿಲ್ಲಾ ಘಟಕದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ನಗರದ ಗಾಂಧಿನಗರದ ಅರಣ್ಯ ಭವನದಲ್ಲಿ ನಡೆದ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದ ಪ್ರಮುಖರು, ನಿರಂತರವಾಗಿ ಕಾಡಾನೆಗಳ ದಾಳಿ, ಹುಲಿ ಮತ್ತು ಕಾಡುಹಂದಿಗಳ ಉಪಟಳದಿಂದ ಕೃಷಿ ಫಸಲು ಹಾನಿಗೀಡಾಗುತ್ತಿದೆ. ಇದರಿಂದ ನಷ್ಟ ಉಂಟಾಗುತ್ತಿದ್ದು, ಬೆಳೆಗಾರರು ಕಂಗಾಲಗಿದ್ದಾರೆ ಎಂದು ಬೇಸಾರ ವ್ಯಕ್ತಪಡಿಸಿದರು.
ವನ್ಯ ಜೀವಿಗಳ ಉಪಟಳವನ್ನು ನಿಗ್ರಹಿಸಿ ಬೆಳೆ ನಷ್ಟ ಪರಿಹಾರವನ್ನು ಶೀಘ್ರವಾಗಿ ಇಲಾಖೆ ವತಿಯಿಂದ ದೋರಕಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭ ನಾಂಗಾಲದ ಕೃಷಿಕರೊಬ್ಬರು ಅರಣ್ಯದ ಅಂಚಿನಲ್ಲಿ ವೈಜ್ಞಾನಿಕವಾಗಿ ಕಂದಕ ನಿರ್ಮಾಣ ಮಾಡಿ ಕಾಡಾನೆ ದಾಳಿಯಿಂದ ಬೆಳೆಗಾರರನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದರು.
ಬಾಳಲೆಯ ಬೆಳೆಗಾರ ಕಾಡಾನೆಗಳ ದಾಳಿ ಮತ್ತು ಜಾನುವಾರುಗಳ ಮೇಲೆ ಹುಲಿ ದಾಳಿಯಿಂದ ಕಂಗಲಾಗಿರುವುದು ಸಮಾನ್ಯವಾಗಿದೆ. ಸರ್ಕಾರವು ನೀಡುವ ಪರಿಹಾರದ ಹಣವನ್ನು ಹೆಚ್ಚಿಸಬೇಕು, ಕಾಡು ಹಂದಿಗಳಿಂದ ನಷ್ಟ ಉಂಟಾದ ಬೆಳೆಗಾರರಿಗೆ ಇಲಾಖೆಯಿಂದ ಸಹಾಯ ಧನ ನೀಡುವಂತೆ ಮನವಿ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕ್ಯಾಡೆಮಾಡ ಮನು ಸೋಮಯ್ಯ ಮಾತನಾಡಿ, ಕಾಡಾನೆ ದಾಳಿಯಿಂದ ಬೆಳೆ ನಷ್ಟವಾದ ಬೆಳೆಗಾರರಿಗೆ ಪರಿಹಾರ ನೀಡುವಲ್ಲಿ ಮತ್ತು ಕಾಡಾನೆ ದಾಳಿಗೋಳಗಾದ ಕಾರ್ಮಿಕರಿಗೆ ಪರಿಹಾರ ಹಣ ನೀಡುವಲ್ಲಿ ವಿಳಂಬವಾಗುತ್ತಿದೆ. ವೈಜ್ಯಾನಿಕ ರೀತಿಯಲ್ಲಿ ಅರಣ್ಯದ ಅಂಚಿನಲ್ಲಿ ಕಂದಕ ನಿರ್ಮಾಣ ಮಾಡಿದಲ್ಲಿ ಕಾಡಾನೆಗಳು ತೋಟಕ್ಕೆ ಲಗ್ಗೆಯಿಡುವುದು ಕಡಿಮೆಯಾಗುತ್ತದೆ. ಬೆಳೆಗಾರರ ಸಂಕಷ್ಟಕ್ಕೆ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು, ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟಬೇಕು ಅಲ್ಲದೆ ಕಾಡನೆಗಳ ಸೆರೆಹಿಡಿದು ಕ್ಯಾಂಪ್ ಗೆ ಸೇರಿಸುವಂತಾಗಬೇಕು ಹುಲಿ ದಾಳಿಯಿಂದ ನಷ್ಟಹೊಂದಿದ ಜಾನುವಾರು ಮಾಲೀಕರುಗಳಿಗೆ ಸೂಕ್ತ ಪರಿಹಾರ ದೊರಕಿಸಲು ಇಲಾಖೆ ಕಾರ್ಯಪ್ರವೃತರಾಗಬೇಕು ಎಂದರು.
ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ರೊಶೀನಿ ನಾಣಯ್ಯ ಅವರು ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿ ಕಾಡಾನೆಗಳ ದಾಳಿಯಿಂದ ನಷ್ಟ ಸಂಭವಿಸಿದ ಬೆಳೆಗಾರರಿಗೆ ಮತ್ತು ದಾಳಿಯಿಂದ ಹಲ್ಲೆಗೊಳಗಾದ ವ್ಯಕ್ತಿಗೆ ಕಾಯ್ದಿರಿಸಿದ ಪರಿಹಾರ ಹಣ ನೀಡಲಾಗಿದೆ. ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಪರಿಹಾರ ಹಣವನ್ನು ಅತೀ ಶೀಘ್ರದಲ್ಲಿ ವಿತರಿಸಲಾಗುತ್ತದೆ. ಕಾಡಾನೆಗಳ ಉಪಟಳವನ್ನು ನಿಗ್ರಹಿಸಲು ವನ್ಯಜೀವಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಲೋಚನೆ ನಡೆಸಿ ಕ್ರಮ ವಹಿಸಲಾಗುವುದು ಎಂದ ಅವರು ಮನವಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ವಿರಾಜಪೇಟೆ ವೃತ್ತ ನೀರಿಕ್ಷಕ ಖ್ಯಾತೆ ಗೌಡ, ತಿತಿಮತಿ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ರೈತ ಸಂಘದ ಜಿಲ್ಲಾ ಸಂಚಾಲಕ ಸುಭಾಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಸುಜಯ್ ಬೊಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಸುಜನ್ ಪೊನ್ನಪ್ಪ, ಮನೆಯಪಂಡ ಗೌತಮ್, ತಾಲ್ಲೂಕು ಘಟಕ ವಲಯ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು, ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.