ಕೊರೋನಾ ಸೋಂಕಿತನ ಮೇಲೆ ಸುಳ್ಳು ಪ್ರಕರಣ ದಾಖಲು : ಅಧಿಕಾರಿಯ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

30/06/2020

ವಿರಾಜಪೇಟೆ, ಜೂ.30: ವಿರಾಜಪೇಟೆ ಪಟ್ಟಣದ ಮೀನುಪೇಟೆಯ ಕೊರೋನಾ ಸೋಂಕಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿರುವ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಜೂ. 20 ರಂದು ದುಬಾಯಿಯಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದ ಜಿಲ್ಲೆಯ ವ್ಯಕ್ತಿಯೊಬ್ಬರು ಥರ್ಮಲ್ ಸ್ಕ್ರೀನಿಂಗ್ ನಂತರ ಒಂದು ದಿನ ಹೋಮ್ ಕ್ವಾರಂಟೈನ್ ನಲ್ಲಿದ್ದು, ಸೇವಾ ಸಿಂದು ಪಾಸ್ ಪಡೆದು ಕೊಡಗು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ವಿರಾಜಪೇಟೆ ಮೀನುಪೇಟೆಯ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಜೂನ್ 23 ರಂದು ಸ್ಥಳೀಯ ಆಶಾ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಕೈಗೆ ಸೀಲ್ ಮಾಡಿ ಹೋಗಿದ್ದರು ಎನ್ನಲಾಗಿದೆ. ಮನೆಗೆ ಹೋಮ್ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿದ್ದು, ಎರಡು ದಿನಗಳು ಕಳೆದರು ಯಾರೂ ಸಹ ವಿಚಾರಿಸಲು ಬಾರದಿದ್ದಾಗ ಮಡಿಕೇರಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಮಡಿಕೇರಿಗೆ ತೆರಳಿ ಗಂಟಲು ದ್ರವ ಪರೀಕ್ಷೆ ಮಾಡಿದ್ದಾರೆ. ಬಳಿಕ ಜೂನ್ 28 ರಂದು ಪರೀಕ್ಷೆಯ ವರದಿ ಬಂದಿದ್ದು ಕೊರೋನಾ ದೃಢಪಟ್ಟಿತ್ತು. ಇದೀಗ ವ್ಯಕ್ತಿ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಬಗ್ಗೆ ಮಾಹಿತಿ ಇಲ್ಲದ ವಿರಾಜಪೇಟೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶ್ರೀಧರ್ ಅವರು ಸೋಂಕಿತ ವ್ಯಕ್ತಿ ಸ್ಥಳೀಯಾಡಳಿತ ಹಾಗೂ ತಾಲ್ಲೂಕಾಡಳಿತಕ್ಕೆ ಮಾಹಿತಿ ನೀಡದೆ ಸಾಂಕ್ರಾಮಿಕ ರೋಗ ನಿಯಂತ್ರಣಾ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಿರುವುದರಿಂದ ಸೋಂಕಿತ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಎಲ್ಲಾ ನಿಯಮಗಳನ್ನು ಪಾಲಿಸಿ ದುಬಾಯಿಯಿಂದ ಬಂದು ಹೋಮ್ ಕ್ವಾರಂಟೈನ್ ಆಗಿದ್ದ ವ್ಯಕ್ತಿಯ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಪಟ್ಟಣ ಪಂಚಾಯತಿ ಸದಸ್ಯರುಗಳು ಸೋಂಕಿತ ವ್ಯಕ್ತಿಯ ಹೆಸರನ್ನು ಬಹಿರಂಗ ಪಡಿಸಬಾರದೆಂಬ ನಿಯಮ ಇದ್ದರೂ ಸೋಂಕಿತನ ಹೆಸರನ್ನು ಬಹಿರಂಗ ಪಡಿಸಿರುವುದರ ಜೊತೆಗೆ ದೂರು ನೀಡಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ವಿರಾಜಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಸಂದರ್ಭ ಪಟ್ಟಣ ಪಂಚಾಯತಿ ಸದಸ್ಯರಾದ ರಂಜಿ ಪೂಣಚ್ಚ, ರಾಜೇಶ್ ಪದ್ಮನಾಭ, ಮುಹಮ್ಮದ್ ರಾಫಿ, ದೇಚಮ್ಮ ಕಾಳಪ್ಪ, ಸಿ.ಕೆ ಪೃಥ್ವಿನಾಥ್, ಎಸ್.ಹೆಚ್ ಮತೀನ್ ವಕೀಲರಾದ ಕೃಷ್ಣ, ನರೇಂದ್ರ ಕಾಮತ್, ಸುನಿಲ್ ಸೇರಿದಂತೆ ಮತ್ತಿತರರು ಇದ್ದರು.