ಜು.2 ರಂದು ಡಿಕೆಶಿ ಪದಗ್ರಹಣ : ಝೂಮ್ ಆಪ್ ನಲ್ಲಿ ಕಾರ್ಯಕ್ರಮ ಪ್ರಸಾರ

30/06/2020

ಮಡಿಕೇರಿ ಜೂ.30 : ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹಾಗೂ ನೂತನ ಕಾರ್ಯಾಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಜು.2 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ರಾಜ್ಯಾದ್ಯಂತ 7800 ಗ್ರಾಮ ಪಂಚಾಯ್ತಿಗಳಲ್ಲಿ ಝೂಮ್ ಆಪ್ ಮೂಲಕ ಈ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಎಂ.ವೆಂಕಪ್ಪ ಗೌಡ ಅವರು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ರಾಜ್ಯಾದ್ಯಂತ ಏಕ ಕಾಲದಲ್ಲಿ ಆಯೋಜಿಸಲಾಗುತ್ತಿದ್ದು, ಪಕ್ಷದ ಬಲವರ್ಧನೆಯ ಮೂಲಕ ಮುಂದಿನ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದು ನಮ್ಮ ಗುರಿಯಾಗಿದೆ ಎಂದರು.
ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯ್ತಿ ಸೇರಿದಂತೆ 117 ಕೇಂದ್ರಗಳಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಗ್ರಾಮದ ಹಿರಿಯ ಕಾಂಗ್ರೆಸ್ಸಿಗರು ಹಾಗೂ ಪ್ರಮುಖರಿಂದ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಇದನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರುಗಳು ನೇರವಾಗಿ ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ಬ್ಲಾಕ್‍ನಲ್ಲಿ ಒಟ್ಟು 17 ಕಾರ್ಯಕ್ರಮಗಳು ನಡೆಯಲಿದ್ದು, ಇದರ ಉಸ್ತುವಾರಿಯನ್ನು ತಾನೇ ನೋಡಿಕೊಳ್ಳಲಿದ್ದೇನೆಂದು ಮಾಹಿತಿ ನೀಡಿದ ವೆಂಕಪ್ಪಗೌಡ, ಮಡಿಕೇರಿ ನಗರದ ಅಂಬೇಡ್ಕರ್, ಭವನ, ಜಿಲ್ಲಾ ಕಾಂಗ್ರೆಸ್ ಕಛೇರಿ, ಕಮ್ಯೂನಿಟಿ ಹಾಲ್ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯಾ ಅಬ್ರಾರ್ ಅವರ ಮನೆಯಲ್ಲೂ ಸ್ಕ್ರೀನ್‍ಗಳನ್ನು ಅಳವಡಿಸುವ ಮೂಲಕ ಕಾರ್ಯಕ್ರಮವನ್ನು ಸಾಂಗವಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ನೇಮಕವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್‍ನಲ್ಲಿ ಮಾತ್ರವಲ್ಲದೆ ಇತರೆ ಪಕ್ಷಗಳಲ್ಲು ಸಂಚಲನ ಮೂಡಿದೆ. ಕಾಂಗ್ರೆಸ್‍ನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರವಾರು ಉಸ್ತುವಾರಿಗಳ ಜೊತೆಗೆ ಸಂಯೋಜಕರುಗಳನ್ನು ನೇಮಕ ಮಾಡಲಾಗಿದೆ. ಅದರಂತೆ ಕೊಡಗು ಜಿಲ್ಲೆಯ ಕುಶಾಲನಗರ ಬ್ಲಾಕ್‍ಗೆ ಪ್ರದೀಪ್ ರೈ, ಸೋಮವಾರಪೇಟೆಗೆ ಎಡ್ವಿನ್ ರಿಚರ್ಡ್, ನಾಪೋಕ್ಲುವಿಗೆ ಯಮುನಾ ಶೆಟ್ಟಿ, ವೀರಾಜಪೇಟೆಗೆ ಜಾನ್ಸನ್, ಪೊನ್ನಂಪೇಟೆಗೆ ರಾಜು ಅವರುಗಳನ್ನು ಸಂಯೋಜಕರನ್ನಾಗಿ ನಿಯೋಜಿಸಲಾಗಿದ್ದು, ಇವರು ಆಯಾ ಬ್ಲಾಕ್‍ನ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‍ನಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ 468 ಮಂದಿ ಉಸ್ತುವಾರಿಗಳಿಗೆ ‘ಟ್ರೇಸರ್’ಗಳನ್ನು ನೀಡಲಾಗಿದೆ. ಈ ಟ್ರೇಸರ್‍ಗಳ ಮೂಲಕ ಅವರ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಸ್ವತಃ ಕೆಪಿಸಿಸಿ ಅಧ್ಯಕ್ಷರೆ ಹದ್ದಿನ ಕಣ್ಣಿಡಲಿದ್ದಾರೆ. ಇದು ಕಾಂಗ್ರೆಸ್‍ನ ಇತಿಹಾಸ ಹಾಗು ದೇಶದಲ್ಲೆ ಪ್ರಥಮ ಪ್ರಯತ್ನವಾಗಿದೆ ಎಂದು ವೆಂಕಪ್ಪ ಗೌಡ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನ, ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಘಟಕದ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.