ಭಾರತೀಯ ಸೇನೆಯ ಯುದ್ಧ ವಿಮಾನ ಪೈಲೆಟ್ ಆಗಿ ಪುಣ್ಯನಂಜಪ್ಪ

30/06/2020

ಮಡಿಕೇರಿ ಜೂ. 30 : ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಪೈಲೆಟ್ (ಫೈಟರ್ ಪೈಲೆಟ್) ಆಗಿ ಸೈನಿಕ ಪರಂಪರೆಗೆ ಹೆಸರಾದ ಕೊಡಗು ಜಿಲ್ಲೆಯ ಯುವತಿಯೊಬ್ಬರು ಆಯ್ಕೆಯಾಗುವ ಮೂಲಕ ಸೇನಾ ಇತಿಹಾಸಕ್ಕೆ ಹೊಸತೊಂದು ಗರಿ ಮೂಡಿದೆ.
ಮೂತಲಃ ಚೆಂಬೆಬೆಳ್ಳೂರಿನವರಾದ ಕೊಳುವಂಡ ದಿ. ನಂಜಪ್ಪ ಹಾಗೂ ಅನು ನಂಜಪ್ಪ ದಂಪತಿಯ ಪುತ್ರಿ ಪುಣ್ಯನಂಜಪ್ಪ ಈ ಸಾಧನೆ ಮಾಡಿರುವ ವೀರ ವನಿತೆಯಾಗಿದ್ದಾಳೆ. ಈ ನಿಟ್ಟಿನಲ್ಲಿ ಅಗತ್ಯ ಪರಿಶ್ರಮದ ಮೂಲಕ ಈ ಹಿಂದೆ ಇಂಡಿಯನ್ ಏರ್‍ಫೋರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರ್ಪಡೆಗೊಂಡ ಪುಣ್ಯ ಪ್ರಾಥಮಿಕ ಹಂತದ ತರಬೇತಿಯ ಬಳಿಕ ಇಂದು ಫೈಟರ್ ಪೈಲೆಟ್ ಆಗಿ ವೈವಿಧ್ಯಮಯವಾದ, ರೋಚಕತೆಯ ಕ್ಲಿಷ್ಟಕರವಾದ ಹೆಚ್ಚಿನ ತರಬೇತಿ ಹೊಂದಲು ಹೈದರಾಬಾದ್‍ನ ಹಕ್ಕಿನಪೇಟೆ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡಿದ್ದು, ಮುಂದಿನ ಡಿಸೆಂಬರ್‍ನಲ್ಲಿ ಕಮೀಷನ್ಡ್ ಅಧಿಕಾರಿಯಾಗಿ ಹೊರಹೊಮ್ಮಲಿದ್ದಾರೆ.
2018ರಿಂದ 2019ರವರೆಗೆ ವಿವಿಧ ಹಂತದ ಪರೀಕ್ಷೆಗಳ ಬಳಿಕ 2019ರ ಜೂನ್‍ನಲ್ಲಿ ಮೆರಿಟ್ ವಿದ್ಯಾರ್ಥಿಯಾಗಿ ಇಂಡಿಯಾನ್ ಏರ್‍ಫೋರ್ಸ್ ಅಕಾಡೆಮಿ ದುಂಡಿಗಲ್ ಹೈದಾರಾಬಾದ್‍ಗೆ ಸೇರ್ಪಡೆಯಾಗಿದ್ದರು. ಇದೀಗ ಹಕ್ಕಿನಪೇಟೆ ತರಬೇತಿ ಕೇಂದ್ರದಲ್ಲಿ ಫೈಟರ್ ಪೈಲೆಟ್ ಆಗಿ ಕಾರ್ಯನಿರ್ವಹಿಸುವಂತಹ ಹೆಚ್ಚಿನ ಕಾರ್ಯಕ್ಷಮತೆಯ ತರಬೇತಿಯನ್ನು ಇವರು ಪಡೆಯಲಿದ್ದಾರೆ.

ಮಗಳ ಆಸಕ್ತಿಗೆ ತಂದೆಯ ಸ್ಫೂರ್ತಿ
ಪುಣ್ಯನಂಜಪ್ಪ ಅವರ ಈ ಸಾಧನೆಗೆ ಆಕೆಯ ಆಸಕ್ತಿಯಂತೆ ತಂದೆ ನಂಜಪ್ಪ ಅವರು ನೀಡಿದ ಸ್ಫೂರ್ತಿಯೇ ಕಾರಣ ಎಂದು ತಾಯಿ ಅನುನಂಜಪ್ಪ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ವಿಜಯನಗರದಲ್ಲಿ ನೆಲೆಸಿರುವ ಇವರು ಪುತ್ರಿ ಪುಣ್ಯ ಚಿಕ್ಕಂದಿನಿಂದಲೇ ಮೈಸೂರಿನಲ್ಲಿ ದಸರಾ ಸಂದರ್ಭ ನಡೆಯುವ ಏರ್‍ಶೋನಿಂದ ಪ್ರಭಾವಿತಳಾಗಿ ತಾನೂ ಕೂಡ ಇಂಡಿಯನ್ ಏರ್‍ಫೋರ್ಸ್‍ಗೆ ಸೇರ್ಪಡೆಯಾಗಲೇಬೇಕೆಂಬ ಹಠ ಹಿಡಿದಿದ್ದಳು. ಆರಂಭದ ಶಿಕ್ಷಣದ ಬಳಿಕ ಇದಕ್ಕಾಗಿಯೇ ಮೈಸೂರಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ಗೆ ಸೇರ್ಪಡೆಯಾಗಿ ಅಲ್ಲಿ ಎಲ್ಲಾ ರಂಗದಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಸಾಧನೆ ತೋರಿದ್ದಾರೆ. ಈಕೆಯ ಆಸಕ್ತಿಯಂತೆಯೇ ಅವರಿಗೆ ಫೈಟರ್ ಪೈಲೆಟ್ ಕ್ಷೇತ್ರವೇ ಲಭಿಸಿದ್ದು, ಈ ಅವಕಾಶ ಪಡೆದ 40 ಮಂದಿಯ ಪೈಕಿ ಏಕೈಕ ಯುವತಿಯಾಗಿಯೂ ಗುರುತಿಸಿಕೊಂಡಿದ್ದರು ಎಂದು ಅನು ನಂಜಪ್ಪ ಹೆಮ್ಮೆ ವ್ಯಕ್ತಪಡಿಸಿದರು.